ಉಡುಪಿ: ಮೇ 04:ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ರವರು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ತನ್ಮಯ ಕುಮಾರ್ ರವರನ್ನು ಭೇಟಿಯಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾರವಾರದ ಸಿ. ಆರ್. ಝಡ್. ವ್ಯಾಪ್ತಿಯಲ್ಲಿ ಮರಳುಗಾರಿಕೆ ಅನುಮತಿ ಬಗ್ಗೆ ಚರ್ಚೆ ನಡೆಸಿ ಮರಳುಗಾರಿಕೆ ಅವಕಾಶ ನೀಡಲು ವಿಶೇಷ ಕ್ರಮ ವಹಿಸುವಂತೆ ಮನವಿ ಮಾಡಿದರು.
ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಿಗೆ ತೊಡಕಾಗಿರುವ ಮತ್ತು ಈಗಾಗಲೇ ಜಿಲ್ಲಾಡಳಿತದಿಂದ ಶಿಫಾರಸ್ಸಿನೊಂದಿಗೆ ಸಲ್ಲಿಸಲಾಗಿರುವ ಸಿ. ಆರ್. ಝಡ್. ಕರಡು ಅಧಿಸೂಚನೆಯಲ್ಲಿನ ಅಗತ್ಯ ತಿದ್ದುಪಡಿಯನ್ನು ಅಂಗೀಕರಿಸಿದ್ದಲಿ ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅನುಮತಿ ಪಡೆಯಲು ಸಾಧ್ಯವಾಗಲಿದೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ಬದಲಾವಣೆಯನ್ನು ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಕರಾವಳಿ ಜಿಲ್ಲೆಯ ಜಿಲ್ಲಾಡಳಿತ ಅಗತ್ಯ ತಿದ್ದುಪಡಿಯ ಬಗ್ಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯನ್ನು ರಾಷ್ಟೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಮರಳುಗಾರಿಕೆ ಆರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈಗಾಗಲೇ ಸಿ. ಆರ್. ಝಡ್. ವಲಯದಲ್ಲಿ ಮರಳುಗಾರಿಕೆ ನಿಷೇಧದಿಂದ ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತಿದ್ದು, ಮರಳು ಕೊರತೆಯಿಂದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು, ಟೆಂಪೋ ಲಾರಿ ವಾಹನ ಮಾಲೀಕರು ಹಾಗೂ ಜನಸಾಮಾನ್ಯರು ಮನೆ ನಿರ್ಮಾಣ ಕಾರ್ಯ ನಡೆಸಲು ಸಮಸ್ಯೆ ಅನುಭವಿಸುತ್ತಿದ್ದು ತಕ್ಷಣ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಹಕಾರ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್ರೀ ರಂಜನ್ ಕುಮಾರ್, ಪ್ರಮುಖರಾದ ಶ್ರೀ ಸತ್ಯರಾಜ್ ಬಿರ್ತಿ, ಶ್ರೀ ಶಿವರಾಜ್ ಹೆಗ್ಡೆ ಉಪಸ್ಥಿತರಿದ್ದರು.