ನವದೆಹಲಿ, ಮೇ 7: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಕೊನೆಗೂ ಭಾರತೀಯ ಸೇನೆ ಪಾಕಿಸ್ತಾನ ಪ್ರೇರಿತ ಉಗ್ರರ ನೆಲೆಗಳ ಮೇಲೆ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಅಂದರೆ ಮೇ 7 ರ ನಸುಕಿನಲ್ಲಿ ದೇಶಾದ್ಯಂತ ಯುದ್ಧ ಸಿದ್ಧತೆ ಅಣಕು ಕವಾಯತು ನಡೆಸುವ ಬಗ್ಗೆ ಘೋಷಣೆಯಾಗಿದ್ದು, ಆ ಸಂದರ್ಭದಲ್ಲೇ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪ್ರತಿಕಾರದ ದಾಳಿ ನಡೆಸಿಯಾಗಿದೆ.
ಪಾಕಿಸ್ತಾನದ ಹಿಡಿತದಲ್ಲಿರುವ ಮೂರು ಸ್ಥಳಗಳ ಭಾರತೀಯ ಸೇನೆ ಕ್ಷಿಪಣಿಗಳ ದಾಳಿ ಮಾಡಿದೆ. ಪಾಕಿಸ್ತಾನಿ ಮಿಲಿಟರಿ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈ ದಾಳಿಯಲ್ಲಿ ಇಲ್ಲಿಯವರೆಗೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ನೆಲೆಗಳನ್ನು ಪ್ರಮುಖವಾಗಿ ಗುರಿಯಾಗಿಸಿ ಭಾರತೀಯ ಸೇನೆ ದಾಳಿ ನಡೆಸಿದೆ. ಭಯೋತ್ಪಾದಕರ ಅನೇಕ ಅಡಗುತಾಣಗಳು ನಾಶವಾಗಿವೆ. ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಪಿಒಕೆಯಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸಲು ಪ್ರಾರಂಭಿಸಿತ್ತು. ದಾಳಿಯ ಭಯದಿಂದಾಗಿ, ಸುಮಾರು 1 ಸಾವಿರ ಹೋಟೆಲ್‌ಗಳು ಮತ್ತು ಮದರಸಾಗಳನ್ನು ಇಲ್ಲಿ ಮುಚ್ಚಲಾಗಿತ್ತು. ಅಜಾನ್ ಕೂಡ ಲೌಡ್ ಸ್ಪೀಕರ್ ಇಲ್ಲದೆ ಮಾಡಲಾಗುತ್ತಿತ್ತು.
ದಾಳಿಯ ನಂತರ ಪಾಕಿಸ್ತಾನದಲ್ಲಿ ಕೋಲಾಹಲ ಉಂಟಾಗಿದೆ. ಭಾರತವು ಮುಜಫರಾಬಾದ್, ಕೋಟ್ಲಿ ಮತ್ತು ಬಹವಾಲ್ಪುರದಲ್ಲಿ ಪ್ರಮುಖ ಕ್ಷಿಪಣಿ ದಾಳಿ ನಡೆಸಿದೆ. ಪಾಕಿಸ್ತಾನಿ ಮಾಧ್ಯಮಗಳ ಹೇಳಿಕೆಯ ನಂತರ, ಭಾರತ ಸರ್ಕಾರವೂ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದೆ.