ನವದೆಹಲಿ, ಏಪ್ರಿಲ್ 9: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ.
ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಮಿಟಿ ನಿರ್ಧಾರಗಳನ್ನು ಪ್ರಕಟಿಸುತ್ತಾ, ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದನ್ನು ತಿಳಿಸಿದರು. ಆರ್ಬಿಐನಿಂದ ಇದು ಸತತ ಎರಡನೇ ರಿಪೋ ದರ ಇಳಿಕೆ ಆಗಿದೆ. ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸರಳವಾಗಿ ತಿಳಿಸುವುದಾದರೆ, ಆರ್ಬಿಐನಿಂದ ಸಾಲ ಪಡೆಯಲು ಬ್ಯಾಂಕುಗಳು ತೆರಬೇಕಿರುವ ಬಡ್ಡಿದರವೇ ರಿಪೋ ರೇಟ್.
ಬೆಲೆ ಏರಿಕೆ ಆಗುತ್ತಿದೆ ಎನಿಸಿದರೆ ಆಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಡಿಮೆ ಮಾಡಲು ಆರ್ಬಿಐ ರಿಪೋ ದರವನ್ನು ಹೆಚ್ಚಿಸುತ್ತದೆ. ಹಣದುಬ್ಬರ ನಿಯಂತ್ರಣದಲ್ಲಿದ್ದರೆ, ಮತ್ತು ಆರ್ಥಿಕತೆಗೆ ಪುಷ್ಟಿ ಸಿಗುವ ಅವಶ್ಯಕತೆ ಇದೆ ಎನಿಸಿದಲ್ಲಿ ಆಗ ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಹಣದ ಹರಿವು ಬೇಕಾಗುತ್ತದೆ. ಆಗ ರಿಪೋ ದರವನ್ನು ಆರ್ಬಿಐ ಇಳಿಸುತ್ತದೆ.