ಉಡುಪಿ, ಮಾರ್ಚ್ 01: ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ರಾಜ್ಯಾದ್ಯಂತ ಪ್ರಾರಂಭಗೊಳ್ಳಲಿದೆ.
2024ರಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆಯಿಂದ ಈ ಬಾರಿ ಒಟ್ಟು 16,203 ಮಂದಿ ಪರೀಕ್ಷಾರ್ಥಿಗಳು (ವಿದ್ಯಾರ್ಥಿಗಳು) 28 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆ ಬರೆಯುವ 16,203 ವಿದ್ಯಾರ್ಥಿಗಳಲ್ಲಿ ಹೊಸದಾಗಿ ಪರೀಕ್ಷೆ ಬರೆಯುವವರು (ಫ್ರೆಶರ್) 15,685 ವಿದ್ಯಾರ್ಥಿಗಳಾದರೆ, 351 ಮಂದಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. 163 ಮಂದಿ ಪುನರಾವರ್ತಿತರು ಪರೀಕ್ಷೆ ಬರೆದರೆ, ನಾಲ್ವರು ತಮ್ಮ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಈ ಬಾರಿಯೂ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಈ ಬಾರಿ ವಿಜ್ಞಾನ ವಿಭಾಗದಿಂದ 7,728 ಮಂದಿ ಪರೀಕ್ಷೆ ಬರೆಯಲಿದ್ದರೆ, ಕಾಮರ್ಸ್ ವಿಭಾಗದಿಂದ 7,246 ಮಂದಿ ಹಾಗೂ ಕಲಾ ವಿಭಾಗದಿಂದ 1230 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯಾವುದೇ ರೀತಿಯಲ್ಲಿ ಗೊಂದಲ, ಸಮಸ್ಯೆಗಳಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುವಂತೆ ಈಗಾಗಲೇ ಸಂಬಂಧಿತರ ಸಭೆ ಕರೆದು ಸ್ಪಷ್ಟ ಸೂಚನೆ ನೀಡಲಾಗಿದೆ. ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ನೋಡಿಕೊಳ್ಳಲು ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.