ಕಾಪು: ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡಿ ಲಾಭ ಗಳಿಸಲು ಯತ್ನಿಸುತ್ತಿದ್ದರೆನ್ನಲಾದ ಇಬ್ಬರನ್ನು ಕಾಪು ಪೊಲೀಸರು ವಶಕ್ಕೆ ಪಡೆದು, 5.710 ಕೆ.ಜಿ. ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 27ರಂದು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ತೇಜಸ್ವಿ ಟಿ.ಐ. ಅವರು ಠಾಣೆಯಲ್ಲಿದ್ದಾಗ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಹಾಗೂ ಆಂಟಿ ಎನ್‌ಡಿಪಿಎಸ್ ಸ್ಕ್ವಾಡ್ ಮುಖ್ಯಸ್ಥ ಅಜ್ಮತ್ ಅಲಿ ಅವರಿಗೆ ದೊರೆತ ಮಾಹಿತಿಯಂತೆ ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ದಾಳಿ ನಡೆಸಲಾಯಿತು.
ಯಾರ್ಡ್ ಫ್ರೆಂಡ್ಸ್ ರಂಗಮಂಟಪದ ಹಿಂಭಾಗದಲ್ಲಿ ಸಮುದ್ರದ ಪಕ್ಕ ಇಬ್ಬರು ವ್ಯಕ್ತಿಗಳು ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಾಗ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಅವರು ಆರೀಫ್ (38), ಬೆಳಪು ಗ್ರಾಮ, ಕಾಪು ಹಾಗೂ ಅಕೀಫ್ (34), ಪಡುತೋನ್ಸೆ ಗ್ರಾಮ, ಉಡುಪಿ ಎಂದು ತಿಳಿದುಬಂದಿದೆ.
ಬಳಿಕ ಸೋಕೋ ಅಧಿಕಾರಿಗಳ ಮೂಲಕ ಪರಿಶೀಲಿಸಿದ ಟೂರಿಸ್ಟ್ ಬ್ಯಾಗ್‌ನಲ್ಲಿ ಮೂರು ಖಾಕಿ ಬಣ್ಣದ ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಮೊದಲ ಪ್ಯಾಕೆಟ್‌ನಲ್ಲಿ 2.63 ಕೆ.ಜಿ., ಎರಡನೇ ಪ್ಯಾಕೆಟ್‌ನಲ್ಲಿ 1.25 ಕೆ.ಜಿ. ಹಾಗೂ ಮೂರನೇ ಪ್ಯಾಕೆಟ್‌ನಲ್ಲಿ 1.83 ಕೆ.ಜಿ. ಸೇರಿ ಒಟ್ಟು 5.710 ಕೆ.ಜಿ. ಗಾಂಜಾ, ಅಂದಾಜು ₹2,85,000 ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ.
ಇಬ್ಬರ ಬಳಿಯಿದ್ದ ಎರಡು ರಿಯಲ್‌ಮಿ ಮೊಬೈಲ್‌ಗಳು, ಒಂದು ನೋಕಿಯಾ ಕೀಪ್ಯಾಡ್ ಮೊಬೈಲ್, ₹225 ನಗದು ಹಾಗೂ ಗಾಂಜಾ ಸಾಗಿಸಲು ಬಳಸಿದ್ದ ಟೂರಿಸ್ಟ್ ಬ್ಯಾಗ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







