ಉಡುಪಿ :ಫೆಬ್ರವರಿ 17: ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವಂತಹ ಎಲ್ಲಾ ಲೇವಾದೇವಿದಾರರು(ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆಗಳನ್ನು ಒಳಗೊಳ್ಳುವುದು ಹಾಗೂ ದಿನಕ್ಕೆ ವಾರಕ್ಕೆ ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ಬಡ್ಡಿಯನ್ನು ವಿಧಿಸುವ ಮೂಲಕ ಲಾಭವನ್ನು ಗಳಿಸಲು ನಗದು ಅಥವಾ ವಸ್ತು ರೂಪದಲ್ಲಿ ಸಾಲ ನೀಡುವ ಅಥವಾ ಯಾವುದೇ ಸ್ವರೂಪದ ಹಣಕಾಸು ನೆರವು ನೀಡುವುದನ್ನು ಪ್ರಧಾನ ಅಥವಾ ಪ್ರಾಸಂಗಿಕ ಚಟುವಟಿಕೆ ಯಾಗಿರಿಸಿಕೊಂಡ ಯಾವುದೇ ಪಾಲುದಾರ ಫರ್ಮು ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಅಥವಾ ಡಿಜಿಟಲ್ ಸಾಲ ನೀಡಿಕೆ ಫ್ಲಾಟ್ ಫಾರ್ಮ್‌ಗಳು) ಈ ಆಧ್ಯಾದೇಶ ಪ್ರಾರಂಭವಾದ ದಿನಾಂಕದಿಂದ 30 ದಿನಗಳೊಳಗಾಗಿ ನೊಂದಣಿ ಪ್ರಾಧಿಕಾರಿಯ ಮುಂದೆ ನೋಂದಣಿಗಾಗಿ ಅರ್ಜಿಯನ್ನು ಸಲಿಸಬೇಕು.
ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ಆಧ್ಯಾದೇಶಕ್ಕೆ 2025ರಲ್ಲಿ ವಿವರಿಸಿರುವ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುವ ಲೇವಾ ದೇವಿದಾರರ ವಿರುದ್ಧ ದೂರಗಳನ್ನು ದಾಖಲಿಸಲು ಜಿಲ್ಲಾಧಿಕಾರಿ ಕಛೇರಿಯಲ್ಲಿ ಹಾಗೂ ಪೊಲೀಸ್ ಕಂಟ್ರೋಲ್ ರೂಂ(ಜಿಲ್ಲಾಧಿಕಾರಿ ಕಛೇರಿ ಸಹಾಯವಾಣಿ -0820-2574802/ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ-112) ಮೂಲಕ ಸಾರ್ವಜನಿಕ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.
ಸಾರ್ವಜನಿಕರು ಮುಕ್ತವಾಗಿ ದೂರುಗಳನ್ನು ದಾಖಲಿಸಿ, ತಮಗೆ ಉಂಟಾಗಿರುವ ತೊಂದರೆ ಕುರಿತು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








