ಉತ್ತರ ಪ್ರದೇಶ, ಜನವರಿ 19: ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಎರಡು-ಮೂರು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಟೆಂಟ್ಗಳು ಹೊತ್ತಿ ಉರಿದಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 20ಕ್ಕೂ ಬೆಂಕಿ ವ್ಯಾಪಿಸಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.
ವಿವೇಕಾನಂದ ಸೇವಾ ಸಮಿತಿಗೆ ಸೇರಿದ 25ಕ್ಕೂ ಹೆಚ್ಚು ಟೆಂಟ್ಗಳಿಗೆ ಬೆಂಕಿ ಹತ್ತಿಕೊಂಡಿದೆ. ಟೆಂಟ್ಗಳಲ್ಲಿ ಇಟ್ಟಿದ್ದ ಸಿಲಿಂಡರ್ಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿರುವುದರಿಂದ ಬೆಂಕಿ ತೀವ್ರತೆ ಹೆಚ್ಚಾಗುತ್ತಿದೆ. ಬೆಂಕಿ ಅವಘಡದಿಂದಾಗಿ ಮಹಾ ಕುಂಭಮೇಳ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಟೆಂಟ್‌ನಲ್ಲಿ ಇರುವವರನ್ನು ಅಧಿಕಾರಿಗಳು ದೂರ ಕಳುಹಿಸಿದ್ದಾರೆ.
ಸದ್ಯ ಸ್ಥಳಕ್ಕಾಗಮಿಸಿದ 50ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟೆಂಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಭಕ್ತರು ಹಣ ಪಾವತಿಸಬೇಕು. ಟೆಂಟ್‌ನಲ್ಲಿ ಇರುವುದರೊಂದಿಗೆ ಆಹಾರ ಮಾಡಿಕೊಳ್ಳುವುದಕ್ಕೂ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಿರುವಾಗ ಟೆಂಟ್ನಲ್ಲಿಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.








