ಮಂಗಳೂರು : ಜನವರಿ 18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ವನ್ನು ಟೀಮ್ ಮಂಗಳೂರು ವತಿಯಿಂದ ಜಿಲ್ಲಾಡಳಿತ ಸಹಕಾರದೊಂದಿಗೆ ಆಯೋಜಿಸಲಾಗಿದೆ.
ಗಾಳಿಪಟ ಉತ್ಸವ ದಲ್ಲಿ ಭಾಗವಹಿಸಲು ವಿದೇಶದ ಕೆಲವು ತಂಡಗಳು ಈಗಾಗಲೇ ಆಗಮಿಸಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ.18ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ. ಮಂಗಳೂರಿನಲ್ಲಿ ನಡೆಯುವ 8ನೇ ವರ್ಷದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದ್ದು, ಇಂಗ್ಲೆಂಡ್, ಜರ್ಮನಿ, ನೆದರ್‌ಲ್ಯಾಂಡ್, ಸ್ಲೋವೆನಿಯಾ, ಇಟಲಿ, ಇನ್ಪೊನಿಯ, ಸ್ವೀಡನ್, ಇಂಡೋನೇಶಿಯಾ, ಪೋರ್ಚುಗಲ್ ಮುಂತಾದ ದೇಶಗಳ ತಂಡಗಳು, ಒಡಿಸ್ಸಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮುಂತಾದ ರಾಜ್ಯ ಮಟ್ಟದ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಟೀಂ ಮಂಗಳೂರಿನ ಪ್ರಶಾಂತ್ ಉಪಾಧ್ಯಾಯ ಮಾತನಾಡಿ, “ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಉತ್ಸವ ಜರಗಲಿದ್ದು, ದೇಶ-ದೇಶಗಳ ನಡುವಿನ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶ ಹೊಂದಲಾಗಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ ಗಾಳಿಪಟಗಳು (ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬೃಹತ್ ಗಾಳಿಪಟಗಳು) ಸೀರೀಸ್ ಕೈಟ್ (ಏಕದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರಿಗೆ ಮನರಂಜನೆ ನೀಡಲಿದೆ. ಜ.18 ಮತ್ತು 19ರಂದು ಸಂಜೆ ಗಂಟೆ 3ರಿಂದ ರಾತ್ರಿ 9ರ ವರೆಗೆ ಗಾಳಿಪಟ ಉತ್ಸವ ನಡೆಯಲಿದೆ ಎಂದರು.
ಮಹಾರಾಷ್ಟ್ರ ಗಾಳಿಪಟ ತಂಡದ ಪ್ರತಿನಿಧಿ ಅಶೋಕ್ ಶಾ ಮಾತನಾಡಿ, ನಾನು ಈವರೆಗೆ ಹಲವು ದೇಶ-ವಿದೇಶಗಳ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದ್ದು, ಮಂಗಳೂರಿಗೆ ಬರುವುದೆಂದರೆ ಖುಷಿ. ಇಲ್ಲಿ ಗಾಳಿಪಟ ಹಾರಾಡಿಸಲು ಉತ್ತಮ ವಾತಾವರಣ ಇದೆ ಎಂದರು.
ಟೀಂ ಮಂಗಳೂರಿನ ಸರ್ವೇಶ್ ರಾವ್, ಪ್ರಾಣ್ ಹೆಗ್ಡೆ, ಗಿರಿಧರ್, ಯತೀಶ್ ಬೈಕಂಪಾಡಿ, ನಿತೇಶ್ ಸಹಿತ ಗ್ರೀಸ್ ದೇಶದ ಪ್ರತಿನಿಧಿ ಕೋಸ್ತಾ, ಥಿಯೋ ಉಪಸ್ಥಿತರಿದ್ದರು.








