ಬೆಂಗಳೂರು : ಅಕ್ಟೋಬರ್ 26: ದ್ರಶ್ಯ ನ್ಯೂಸ್ ರಾಜ್ಯದಲ್ಲಿ ಜಾರಿಯಲ್ಲಿರುವ ‘ಗೃಹಜ್ಯೋತಿ’ ಯೋಜನೆ ಅಡಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ‘ಸಿ’ ಗ್ರೇಡ್ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ.
ಇಲಾಖೆಯ ವ್ಯಾಪ್ತಿಯಲ್ಲಿ’ಎ’ ಗ್ರೇಡ್‌ನ 175, ‘ಬಿ’ ಗ್ರೇಡ್‌ನ 330 ಮತ್ತು ‘ಸಿ’ ಗ್ರೇಡ್‌ನ 34,700 ದೇವಸ್ಥಾನಗಳಿವೆ. ವಾರ್ಷಿಕ 25 ಲಕ್ಷ ರೂಪಾಯಿಗೂ ಅಧಿಕ ವರಮಾನವುಳ್ಳ ದೇವಸ್ಥಾನಗಳಿಗೆ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯ ಹಂತದಲ್ಲೇ ಅವಕಾಶಗಳಿವೆ. ಆದರೆ, 1 ರಿಂದ 5 ಲಕ್ಷ ರೂ. ಒಳಗೆ ಆದಾಯ ಪಡೆಯುವ ‘ಸಿ’ ಗ್ರೇಡ್ ದೇಗುಲಗಳಿಗೆ ಮಾತ್ರ ಯಾವುದೇ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ.
ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ಹೊರತು ಪಡಿಸಿದರೇ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳು ಇಂದಿಗೂ ವೆಚ್ಚ ನಿರ್ವಹಣೆಗೆ ಪರದಾಟ ನಡೆಸುತ್ತಿವೆ. ಇಂತಹ ಬಡ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೊಳಿಸಲು ಮುಜರಾಯಿ ಇಲಾಖೆ ಮುಂದಾಗಿದೆ.
ರಾಜ್ಯದ ‘ಸಿ’ ಗ್ರೇಡ್ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.








