ಉಡುಪಿ : ಸಾಂಪ್ರದಾಯಿಕವಾಗಿ, ಸಹೋದರಿಯರು ತಮ್ಮ ಸಹೋದರರ ಕೈಗೆ ರಕ್ಷಾ ಬಂಧನ ದಿನದಂದು ರಾಖಿ ಕಟ್ಟುತ್ತಾರೆ. ಒಡಹುಟ್ಟಿದವರೊಂದಿಗಿನ ಅರ್ಥಪೂರ್ಣ ಬಂಧವನ್ನು ವಾರ್ಷಿಕವಾಗಿ ಆಚರಿಸಲು ಇರುವ ಹಬ್ಬವೇ ರಕ್ಷಾ ಬಂಧನ ಅಥವಾ ರಾಖಿ ಹಬ್ಬ.

ಸಹೋದರನ ಸಂತೋಷ, ಆರೋಗ್ಯ, ಆಯಸ್ಸಿಗಾಗಿ ಸಹೋದರಿ ಬಯಸಿದರೆ, ತಮ್ಮ ಸಹೋದರಿಯರನ್ನು ಸದಾ ಕಾಲ ರಕ್ಷಿಸಲು ಮತ್ತು ಪ್ರೀತಿಸಲು ಸಹೋದರ ಭರವಸೆ ನೀಡುತ್ತಾನೆ. ಸಹೋದರಿಯ ಶ್ರೀರಕ್ಷೆ ಸಹೋದರನ ಕರ್ತವ್ಯವಾಗಿದೆ. ಇದೇ ರಕ್ಷಾ ಬಂಧನದ ಮಹತ್ವವಾಗಿದೆ. ಹಾಗೆಯೇ ಸಹೋದರಿಗೆ ಸಹೋದರ ಉಡುಗೊರೆಯನ್ನು ನೀಡುತ್ತಾನೆ.

ಶ್ರಾವಣ ಮಾಸದ ಹುಣ್ಣೆಮೆಯ ದಿನ ಅಂದರೆ ನೂಲು ಹುಣ್ಣಿಮೆಯ ದಿನ ರಕ್ಷಾ ಬಂಧನ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 30 ರಂದು (ಬುಧವಾರ) ರಕ್ಷಾ ಬಂಧನ ಬಂದಿದೆ. ಭದ್ರ ಕಾಲ ಇರುವ ಕಾರಣ ಆಗಸ್ಟ್ 30ರ ಮುಂಜಾನೆ 5.50 ರಿಂದ ಸಂಜೆ 6:03ರ ನಡುವೆ ರಾಖಿ ಕಟ್ಟಲು ಶುಭ ಮುಹೂರ್ತವಿದೆ.

ರಕ್ಷಾ ಬಂಧನದ ಇತಿಹಾಸ
ಹಿಂದೂ ಪುರಾಣದ ಪ್ರಕಾರ, ಮಹಾಭಾರತದ ಅವಧಿಯಿಂದಲೇ ರಕ್ಷಾ ಬಂಧನದ ಇತಿಹಾಸ ಆರಂಭವಾಗುತ್ತದೆ. ಆ ಸಮಯದಲ್ಲಿ ಸುದರ್ಶನ ಚಕ್ರ ತಾಗಿ ಕೃಷ್ಣನ ಕಿರುಬೆರಳಿಗೆ ಗಾಯವಾಗುತ್ತದೆ. ಆಕಸ್ಮಿಕವಾಗಿ ಆದ ಈ ಗಾಯವನ್ನು ತಪ್ಪಿಸಲು ದ್ರೌಪದಿಯು ಪ್ರಯತ್ನಿಸುತ್ತಾಳೆ. ಅದಕ್ಕಾಗಿ ಕೃಷ್ಣನ ಮಣಿಕಟ್ಟಿನ ಮೇಲೆ ಬಟ್ಟೆಯನ್ನು ಕಟ್ಟುತ್ತಾಳೆ. ಈ ಮೂಲಕ ಹೆಚ್ಚಿನ ರಕ್ತ ಹೊರಕ್ಕೆ ಹೋಗದಂತೆ ತಡೆಯುತ್ತಾಳೆ. ದ್ರೌಪದಿಯ ಈ ಕ್ರಮದಿಂದ ಕೃಷ್ಣ ತೃಪ್ತನಾಗುತ್ತಾನೆ. ದ್ರೌಪದಿಯ ಈ ಕಾಳಜಿಯನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾನೆ. ಇದನ್ನು ಶ್ರೀಕೃಷ್ಣನು ರಕ್ಷಾ ಸೂತ್ರ ಎಂದು ಕರೆಯುತ್ತಾನೆ. ಮಹಾಭಾರತದಲ್ಲಿ ದುಷ್ಯಾಸನ ದ್ರೌಪದಿಯ ಸೀರೆ ಎಳೆಯುವ ಸಂದರ್ಭದಲ್ಲಿ ಶ್ರೀಕೃಷ್ಣನು ದ್ರೌಪದಿಯ ಮಾನ ಕಾಪಾಡುತ್ತಾನೆ. ಈ ಮೂಲಕ ತನಗೆ ರಕ್ಷಾ ಸೂತ್ರ ಕಟ್ಟಿದ ಸಹೋದರಿಯ ರಕ್ಷಣೆ ಮಾಡುತ್ತಾನೆ.

.






