ಸಾಣೂರು : ಮಂಗಳೂರು–ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಾಣೂರು ಗ್ರಾಮದ ಗಡಿ ಪ್ರದೇಶದಲ್ಲಿರುವ ನೂರಾರು ವರ್ಷಗಳ ಪಾರಂಪರಿಕ ನೈಸರ್ಗಿಕ ಜಲಚಿಲುಮೆ ‘ಸಾಣೂರು ಚಿಲಿಂಬಿ’ಯ ಸಂರಕ್ಷಣೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇರುವತ್ತೂರು ಕಡೆಯಿಂದ ಚಿಲಿಂಬಿ ಗುಡ್ಡದ ಮೂಲಕ ವರ್ಷವಿಡೀ ಹರಿದುಬರುವ ಈ ನೈಸರ್ಗಿಕ ಜಲಧಾರೆ ಹಿಂದಿನಿಂದಲೂ ಪ್ರಯಾಣಿಕರ ದಣಿವಾರಿಸುವ ತಾಣವಾಗಿ ಗುರುತಿಸಿಕೊಂಡಿದೆ. ವಾಹನ ಸವಾರರು ಇಲ್ಲಿ ನಿಂತು ನೀರು ಕುಡಿದು, ವಿಶ್ರಾಂತಿ ಪಡೆದು ಪ್ರಯಾಣ ಮುಂದುವರಿಸುತ್ತಿದ್ದರು.ಸಾಣೂರು ಚಿಲಿಂಬಿಯ ನೈಸರ್ಗಿಕ ಸೌಂದರ್ಯ ಮತ್ತು ಪಾರಂಪರಿಕ ಮಹತ್ವವನ್ನು ಉಳಿಸಿಕೊಂಡು, ಸಣ್ಣ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಈ ಕುರಿತು ಮಾಹಿತಿ ಫಲಕ ಅಳವಡಿಸಿ ಪ್ರವಾಸಿಗರಿಗೆ ಈ ಜಲಮೂಲದ ಇತಿಹಾಸವನ್ನು ಪರಿಚಯಿಸಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.
ಈ ಸಂಬಂಧ ಸಾಮಾಜಿಕ ಚಿಂತಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಕ್ಷಣ ಗಮನಹರಿಸಿ ಜಲಮೂಲದ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸುವಂತೆ ಆಗ್ರಹಿಸಿದ್ದಾರೆ.
ಹೆದ್ದಾರಿ ಅಭಿವೃದ್ಧಿಯಾಗಲಿ, ಸಾಣೂರು ಚಿಲಿಂಬಿಯ ನೈಸರ್ಗಿಕ ಜಲಧಾರೆ ಮುಂದಿನ ಪೀಳಿಗೆಗೂ ಉಳಿಯಲಿ ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಶಯವಾಗಿದೆ.







