ಮಂಗಳೂರು: ಅಮೆಜಾನ್ ಕಸ್ಟಮರ್ ಕೇರ್ ಪ್ರತಿನಿಧಿಯೆಂದು ನಂಬಿಸಿ ಹಣ ಮರುಪಾವತಿ ಮಾಡುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ₹1.30 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
37 ವರ್ಷದ ಮಹಿಳೆಯೊಬ್ಬರು ಅಕ್ಟೋಬರ್ 21ರಂದು ಅಮೆಜಾನ್ ಆ್ಯಪ್ ಮೂಲಕ ಸೀಲಿಂಗ್ ಫ್ಯಾನ್ ಆರ್ಡರ್ ಮಾಡಿದ್ದು, ಇದಕ್ಕಾಗಿ ಪತಿಯ ಗೂಗಲ್ ಪೇ ಖಾತೆಯಿಂದ ₹7,903 ಪಾವತಿಸಿದ್ದರು. ಆದರೆ ಬಳಿಕ ಆರ್ಡರ್ ರದ್ದಾಗಿದ್ದು, ಪಾವತಿಸಿದ ಹಣ ಮರುಪಾವತಿಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 31ರಂದು ಗೂಗಲ್‌ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ನಂಬರ್ ಹುಡುಕಿದಾಗ 9940541823 ಎಂಬ ಮೊಬೈಲ್ ಸಂಖ್ಯೆ ದೊರೆತಿತ್ತು. ಅದಕ್ಕೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬರು ಅಮೆಜಾನ್ ಕಸ್ಟಮರ್ ಕೇರ್ ಪ್ರತಿನಿಧಿಯೆಂದು ಪರಿಚಯಿಸಿಕೊಂಡು, ಹಣ ಮರುಪಾವತಿ ಮಾಡುವುದಾಗಿ ನಂಬಿಸಿದ್ದಾರೆ.
ಬಳಿಕ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡುವಂತೆ ಸೂಚಿಸಿ, ಮಹಿಳೆಗೆ ತಿಳಿಯದಂತೆ ₹80,000 ವರ್ಗಾಯಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರ ಬ್ಯಾಂಕ್ ಖಾತೆಯಿಂದ IMPS ಮೂಲಕ ₹50,000 ಹಣವೂ ವರ್ಗಾವಣೆಯಾಗಿದ್ದು, ಒಟ್ಟು ₹1,30,000 ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆನ್‌ಲೈನ್ ವಂಚನೆ ನಡೆಸಿದ ಅಪರಿಚಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.







