ಮಣಿಪಾಲ, ಅಕ್ಟೋಬರ್ 29, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ‘ಸುಸ್ಥಿರ ಆರೋಗ್ಯ ಶ್ರೇಷ್ಠತೆ: ನಾವೀನ್ಯದ ಮುನ್ನಡೆ, ಆರೋಗ್ಯ ಕಾಳಜಿಯ ವಿಸ್ತರಣೆ’ ಕುರಿತು ಅಕ್ಟೋಬರ್ 30, 31ರಂದು ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಂಡಿದೆ.
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂ.ಸಿ.ಒ.ಎನ್.) ಆಯೋಜಿಸುತ್ತಿರುವ ಈ ಸಮಾವೇಶವು, ಮಣಿಪಾಲದ ಕೆಎಂಸಿಯಲ್ಲಿನ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ವೈದ್ಯಕೀಯ ವೃತ್ತಿಪರರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಸಾಕ್ಷ್ಯಾಧಾರಿತ ವಿಧಾನಗಳು ಹಾಗೂ ನಾವೀನ್ಯತೆಯ ಮೂಲಕ ಆರೋಗ್ಯ ವ್ಯವಸ್ಥೆ ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸುವ ಕುರಿತು ಇಲ್ಲಿ ಚರ್ಚೆಗಳು ನಡೆಯಲಿವೆ.
ಪ್ರಮುಖ ಐದು ವಿಷಯಗಳ ಮೇಲೆ ಈ ಸಮ್ಮೇಳನ ಬೆಳಕು ಚೆಲ್ಲಲಿದೆ. ಸುಸ್ಥಿರ ಆರೋಗ್ಯ ವ್ಯವಸ್ಥೆ, ಆರೋಗ್ಯ ಕ್ಷೇತ್ರದಲ್ಲಿ ನಾಯಕತ್ವ ಮತ್ತು ಕಾರ್ಯಪಡೆಯ ಶ್ರೇಷ್ಠತೆ, ನರ್ಸಿಂಗ್ ಸಂಶೋಧನೆ-ನಾವೀನ್ಯ ಮತ್ತು ಜಾಗತಿಕ ಸಹಯೋಗ, ಡಿಜಿಟಲ್ ಹೆಲ್ತ್ ಹಾಗೂ ಸಮುದಾಯ ಸಹಭಾಗಿತ್ವ ಮತ್ತು ರೋಗ ತಡೆಗಟ್ಟುವಿಕೆ. ಆರೋಗ್ಯ ಕ್ಷೇತ್ರದಲ್ಲಿ ನಿರಂತರವಾಗಿ ಎದುರಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸುವ ಕಾರ್ಯತಂತ್ರಗಳು, ನೂತನ ವೈದ್ಯಕೀಯ ವಿಧಾನಗಳು ಮತ್ತು ಸಂಶೋಧನಾ ಪ್ರಗತಿಯ ಸಂಬಂಧಿಸಿ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಮೊದಲ ದಿನದಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಡಾ. ರಾಜ್ ಶಂಕರ್ ಘೋಷ್ ಹಾಗೂ ಸಿಗ್ನಿಯಾ ಹೆಲ್ತ್ಕೇರ್ನ ಸಂಸ್ಥಾಪಕಿ ಮತ್ತು ಸಿಇಒ ತಂಕಂ ಗೋಮೆಜ್ ಅವರ ಗೋಷ್ಠಿಗಳು ಇರಲಿದೆ. ವೈಜ್ಞಾನಿಕ ಪ್ರಬಂಧ ಮಂಡನೆ ಮತ್ತು ಪೋಸ್ಟರ್ ವಾಕ್ಗಳು ಭಾಗವಹಿಸುವ ಪ್ರತಿನಿಧಿಗಳಿಗೆ ತಮ್ಮ ಸಂಶೋಧನಾ ಸಾಧನೆಗಳನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಿದ್ದು, ಜ್ಞಾನ ವಿನಿಮಯ ಹಾಗೂ ವೃತ್ತಿಪರ ಕಲಿಕೆಗೆ ಉತ್ತೇಜನ ನೀಡಲಿದೆ.
ಸಮ್ಮೇಳನದ ಎರಡನೇ ದಿನದ ಪ್ರಧಾನ ಗೋಷ್ಠಿಗಳಲ್ಲಿ ಎಂ.ಸಿ.ಒ.ಎನ್. ಡೀನ್ ಮತ್ತು ಪ್ರಾಧ್ಯಾಪಕಿ ಡಾ. ಜುಡಿತ್ ಎ. ನೊರೊನ್ಹಾ, ಮಣಿಪಾಲ ಎಂಐಟಿಯ ಸ್ಕೂಲ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಸಹ-ಪ್ರಾಧ್ಯಾಪಕ ಡಾ. ಮಂಜುನಾಥ್ ಕೆ. ಎನ್. ಮತ್ತು ಮಂಗಳೂರು ಕೆಎಂಸಿಯ ಡೀನ್ ಹಾಗೂ ಕಮ್ಯುನಿಟಿ ಮೆಡಿಸಿನ್ ಪ್ರಾಧ್ಯಾಪಕರಾದ ಡಾ. ಬಿ. ಉನ್ನಿಕೃಷ್ಣನ್ ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಸಂಶೋಧನೆ, ಹೊಸ ಆವಿಷ್ಕಾರಗಳು ಮತ್ತು ತಜ್ಞರ ಅನುಭವಗಳ ವಿನಿಮಯದ ಮೂಲಕ ಆರೋಗ್ಯ ವ್ಯವಸ್ಥೆಯ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುವಲ್ಲಿ ಈ ಸಮಾವೇಶ ಪ್ರಮುಖ ಪಾತ್ರ ವಹಿಸಲಿದೆ. ಅತ್ಯುತ್ತಮ ಕಾರ್ಯಪಡೆಯನ್ನು ರೂಪಿಸುವ ಹಾಗೂ ರೋಗಿ ಕೇಂದ್ರಿತ ಆರೈಕೆ ನೀಡುವತ್ತ ಸಾಗುತ್ತಿರುವ ಪ್ರಯತ್ನಗಳಿಗೆ ಈ ಸಮ್ಮೇಳನವು ಗಣನೀಯ ಕೊಡುಗೆ ನೀಡಲಿದೆ.






