ಉಡುಪಿ: ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ಮಾಬುಕಳ ಜಂಕ್ಷನ್ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ರೊನಾಲ್ಡ್ ಲೂವಿಸ್ (62) ಮೃತಪಟ್ಟಿದ್ದಾರೆ.
ಅಕ್ಟೋಬರ್ 22ರಂದು ಸಂಜೆ 4.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಹಂಗಾರಕಟ್ಟೆ ಕಡೆಯಿಂದ ಸೈಕಲ್‌ನಲ್ಲಿ ಬಂದ ರೊನಾಲ್ಡ್ ಲೂವಿಸ್ ಅವರು ಮಾಬುಕಳ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್ ಬಳಿ ಸೈಕಲ್ ನಿಲ್ಲಿಸಿಕೊಂಡು ಕುಂದಾಪುರ ಕಡೆಗೆ ಹೋಗಲು ರಸ್ತೆ ಪ್ರವೇಶಿಸಲು ಕಾಯುತ್ತಿದ್ದರು ಎನ್ನಲಾಗಿದೆ.ಈ ವೇಳೆ ಉಡುಪಿ ಕಡೆಯಿಂದ ಕುಂದಾಪುರದತ್ತ ಬರುತ್ತಿದ್ದ ಲಾರಿಯನ್ನು ಚಾಲಕ ಸದಾನಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ರೊನಾಲ್ಡ್ ಲೂವಿಸ್ ಅವರಿಗೆ ಗಂಭೀರ ರಕ್ತಗಾಯವಾಗಿದ್ದು, ತಕ್ಷಣ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







