ಮಣಿಪಾಲ: ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ವೇಳೆ ₹7.50 ಲಕ್ಷ ಮೌಲ್ಯದ ಕ್ಯಾಮರಾ, ಲೆನ್ಸ್‌ಗಳು ಹಾಗೂ ಇತರ ವಸ್ತುಗಳನ್ನು ಕಳವು ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಮೂಲದ ಸೈಫ್ ಅಲಿ (28) ಅವರು ಮೀರಜ್‌ನಲ್ಲಿ ಆದಿತ್ಯ ಸುತಾರ ಎಂಬುವವರೊಂದಿಗೆ ಫೋಟೋ ಸ್ಟುಡಿಯೋ ನಡೆಸುತ್ತಿದ್ದರು. ಇವರಿಗೆ ಸಲ್ಮಾನ್ ಚಾಂದವಾಲೆ ಎಂಬುವವರ ಮೂಲಕ ಕಾರ್ತಿಕ್ ನಾಯ್ಡು ಎಂಬಾತನ ಪರಿಚಯವಾಗಿತ್ತು. ಉಡುಪಿಯ ಕೆಲವು ಸ್ಥಳಗಳಿಗೆ ಭೇಟಿ ನೀಡಲು ಉತ್ತಮ ಕ್ಯಾಮರಾ ಹಾಗೂ ಫೋಟೋಗ್ರಾಫರ್ ಬೇಕೆಂದು ಕಾರ್ತಿಕ್ ತಿಳಿಸಿದ್ದ ಎನ್ನಲಾಗಿದೆ.
ಅದರಂತೆ ಅಕ್ಟೋಬರ್ 21ರಂದು ಸೈಫ್ ಅಲಿ ಅವರು ತಮ್ಮ ಸ್ನೇಹಿತ ಆದಿತ್ಯ ಸುತಾರ ಹಾಗೂ ಕಾರ್ತಿಕ್ ನಾಯ್ಡು ಜೊತೆ ಕಾರಿನಲ್ಲಿ ಬೆಳಗಾವಿಯಿಂದ ಮಣಿಪಾಲಕ್ಕೆ ಆಗಮಿಸಿ, ಹೋಟೆಲ್ ಗ್ರೀನ್ ಪಾರ್ಕ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು.
ಅದೇ ದಿನ ರಾತ್ರಿ ಸುಮಾರು 8 ಗಂಟೆಗೆ ಕಾರ್ತಿಕ್ ನಾಯ್ಡು, ಸೈಫ್ ಅಲಿ ಹಾಗೂ ಆದಿತ್ಯ ಸುತಾರ ಅವರನ್ನು ಊಟ ತರಲು ಕಳುಹಿಸಿದ್ದ. ರಾತ್ರಿ 8.45ರ ಸುಮಾರಿಗೆ ಇಬ್ಬರೂ ಹೋಟೆಲ್ ಕೊಠಡಿಗೆ ಮರಳಿದಾಗ ಬಾಗಿಲು ಲಾಕ್ ಆಗಿತ್ತು. ಕಾರ್ತಿಕ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಹೋಟೆಲ್ ಸಿಬ್ಬಂದಿಯ ಸಹಾಯದಿಂದ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದು ಪರಿಶೀಲಿಸಿದಾಗ, ಕಾರ್ತಿಕ್ ನಾಯ್ಡು ನಾಪತ್ತೆಯಾಗಿರುವುದು ಹಾಗೂ ಕೊಠಡಿಯಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳವಾಗಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ವಸ್ತುಗಳಲ್ಲಿ Canon R6 Mark II ಕ್ಯಾಮರಾ, ವಿವಿಧ ಕಂಪನಿಗಳ ನಾಲ್ಕು ಲೆನ್ಸ್‌ಗಳು, ಆರು ಮೆಮೊರಿ ಕಾರ್ಡ್‌ಗಳು, ಬ್ಯಾಟರಿಗಳು, ಫ್ಲ್ಯಾಶ್, ಚಾರ್ಜರ್‌ಗಳು, ಕ್ಯಾನನ್ ಅಡಾಪ್ಟರ್, ಕ್ಯಾಮರಾ ಬ್ಯಾಗ್, ವಾಚ್ ಹಾಗೂ ಬೆಳ್ಳಿ ಸರ ಸೇರಿವೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು ₹7,50,000 ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







