ಉಡುಪಿ: ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಮಿಷಕ್ಕೆ ಒಳಗಾದ 75 ವರ್ಷದ ವೃದ್ಧರೊಬ್ಬರು ಸೈಬರ್ ವಂಚಕರಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ರಮೇಶ ಶೆಟ್ಟಿ (75) ಅವರಿಗೆ 2026ರ ಜುಲೈ 29ರಂದು ಫೇಸ್‌ಬುಕ್‌ನಲ್ಲಿ HDFC Security ಹೆಸರಿನಲ್ಲಿ ಲಿಂಕ್ ಬಂದಿತ್ತು. ಅದರ ಮೂಲಕ ಹೂಡಿಕೆದಾರರ ಐಡಿ ಪಡೆದು ಟ್ರೇಡಿಂಗ್ ಆರಂಭಿಸಿದ ಅವರು ಮೊದಲಿಗೆ ₹40,000 ಹೂಡಿಕೆ ಮಾಡಿದ್ದು, ಅದರಲ್ಲಿ ಶೇ. 5ರಷ್ಟು ಲಾಭ ತೋರಿಸಲಾಗಿತ್ತು. ಇದನ್ನು ನಂಬಿದ ಅವರು ಬಳಿಕ ಹಂತ ಹಂತವಾಗಿ ವಿವಿಧ ಮೊತ್ತಗಳನ್ನು ಹೂಡಿಕೆ ಮಾಡಿದ್ದರು.
ಈ ನಡುವೆ ಸೆಪ್ಟೆಂಬರ್ 1ರಂದು ESDS Software Solution Ltd. ಕಂಪನಿಯ 3,400 ಷೇರುಗಳನ್ನು ತಲಾ ₹272ರಂತೆ ಹಂಚಿಕೆ ಮಾಡಲಾಗಿದ್ದು, ಅದರ ಒಟ್ಟು ಮೌಲ್ಯ ₹9,24,800 ಎಂದು ಸಂದೇಶ ಬಂದಿತ್ತು. ತಾವು ಐಪಿಒಗೆ ಅರ್ಜಿ ಸಲ್ಲಿಸಿಲ್ಲ ಮತ್ತು ಅಷ್ಟು ಹಣ ತಮ್ಮ ಬಳಿ ಇಲ್ಲ ಎಂದು ತಿಳಿಸಿ, ಹಂಚಿಕೆಯನ್ನು ರದ್ದುಗೊಳಿಸುವಂತೆ ಕೇಳಿಕೊಂಡರೂ ವಂಚಕರು ಒಪ್ಪಲಿಲ್ಲ ಎನ್ನಲಾಗಿದೆ.
ಬದಲಾಗಿ ಹಣ ಪಾವತಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಸಾಲ ಮಾಡಿ ₹9,24,800 ಪಾವತಿಸಿದ್ದರು.
ನಂತರ ಹೂಡಿಕೆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಲಾಭಾಂಶದ ಶೇ. 10ರ ಮೊತ್ತವೆಂದು ₹5,10,724 ಪಾವತಿಸುವಂತೆ ವಂಚಕರು ಒತ್ತಾಯಿಸಿದ್ದರು. ಹಣ ಹಿಂಪಡೆಯಲು ಅವಕಾಶ ನೀಡದಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ರಮೇಶ ಶೆಟ್ಟಿ ಅವರು ಮತ್ತೆ ಹಣ ಪಾವತಿಸಿದ್ದರು. ಆದರೆ ಹಣ ಪಾವತಿಸಿದ ಬಳಿಕ ವಂಚಕರು ವಾಟ್ಸ್‌ಆ್ಯಪ್ ಸಂದೇಶ ಮತ್ತು ಫೋನ್ ಕರೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಮೂಲಕ ಸೈಬರ್ ವಂಚಕರು ಹಂತ ಹಂತವಾಗಿ ಹಣ ಪಡೆದು ವಂಚಿಸಿರುವುದಾಗಿ ರಮೇಶ ಶೆಟ್ಟಿ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/2026ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4)ರಂತೆ ಪ್ರಕರಣ ದಾಖಲಾಗಿದೆ.
ಸೂಚನೆ: ಆನ್‌ಲೈನ್ ಹೂಡಿಕೆ ಮಾಡುವಾಗ ಅಪರಿಚಿತ ಲಿಂಕ್‌ಗಳು ಮತ್ತು ಹೆಚ್ಚಿನ ಲಾಭದ ಆಮಿಷಗಳಿಗೆ ಮರುಳಾಗಬೇಡಿ. ಹಣ ಹಿಂಪಡೆಯಲು ಹೆಚ್ಚುವರಿ ಶುಲ್ಕ ಅಥವಾ ತೆರಿಗೆ ಪಾವತಿಸುವಂತೆ ಒತ್ತಾಯಿಸಿದರೆ ಎಚ್ಚರಿಕೆ ವಹಿಸಿ.







