ಬೈಂದೂರು: ಸುಮಾರು 15 ದಿನಗಳಿಂದ ಕಾಣೆಯಾಗಿದ್ದ ಯುವಕ ಹಾಗೂ ಯುವತಿಯ ಮೃತದೇಹಗಳು ಶ್ರೀ ಮೂಕಾಂಬಿಕಾ ಅಭಯಾರಣ್ಯ ಪ್ರದೇಶದಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಗೋಳಿಹೊಳೆ ಗ್ರಾಮದ ಉದಯ ನಾಯ್ಕ (45) ಅವರ ತಮ್ಮ ವಿಠ್ಠಲ ನಾಯ್ಕ (35) ಹಾಗೂ ಜಡ್ಕಲ್ ಗ್ರಾಮದ ಭವ್ಯ (33) ಅವರು ಕೆಲ ಸಮಯದಿಂದ ಸ್ನೇಹದಿಂದ ಇದ್ದರು. ಇವರಿಬ್ಬರ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಬಳಿಕ ಇಬ್ಬರೂ ಕಾಣೆಯಾಗಿದ್ದರು.
ಸೆ.29ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಉದಯ ನಾಯ್ಕ ಅವರು ಮನೆಯ ಸಮೀಪದ ಶ್ರೀ ಮೂಕಾಂಬಿಕಾ ಅಭಯಾರಣ್ಯಕ್ಕೆ ಕಟ್ಟಿಗೆ ತರಲು ತೆರಳಿದ್ದ ವೇಳೆ ಸೌಪರ್ಣಿಕಾ ನದಿಯ ದಡದಲ್ಲಿ ದುರ್ವಾಸನೆ ಬಂದಿದ್ದು, ಪರಿಶೀಲಿಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿದ್ದ ಬಟ್ಟೆ ಹಾಗೂ ಇತರ ವಸ್ತುಗಳನ್ನು ಗಮನಿಸಿದಾಗ ಮೃತರು ತಮ್ಮ ವಿಠ್ಠಲ ನಾಯ್ಕ ಮತ್ತು ಭವ್ಯ ಎಂಬುದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಇಬ್ಬರೂ ಸುಮಾರು 15 ದಿನಗಳ ಹಿಂದೆ ಅಭಯಾರಣ್ಯದ ನಿರ್ಜನ ಪ್ರದೇಶಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







