ಉಡುಪಿ, ಸೆ. 30: ಕಲ್ಯಾಣಪುರ–ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ದೇಶದ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಕಳೆದ ಸೆ. 21ರ ರಾತ್ರಿ ನಡೆದಿದೆ.
ಆಸ್ಪತ್ರೆಗೆ ದಾಖಲಿಸಲಾದ ವ್ಯಕ್ತಿ ರಷ್ಯಾ ದೇಶದ ಪ್ರಜೆಯಾಗಿದ್ದು, ಭಾರತದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದಿದ್ದರೆಂದು ತಿಳಿದುಬಂದಿತ್ತು. ವಿದೇಶಿ ಪ್ರಜೆಯಾಗಿರುವ ಹಿನ್ನೆಲೆಯಲ್ಲಿ ನಿತ್ಯಾನಂದ ಒಳಕಾಡುವರು ಘಟನೆಯ ವಿವರವನ್ನು ನಗರ ಪೊಲೀಸ್ ಠಾಣೆಗೆ ಮೌಖಿಕವಾಗಿ ತಿಳಿಸಿದ್ದರು.
ಪೊಲೀಸರ ವಿಚಾರಣೆಯಲ್ಲಿ ಪ್ರವಾಸಿಗನ ವೀಸಾ ಅವಧಿ ಮುಗಿದಿದ್ದು, ಪಾಸ್‌ಪೋರ್ಟ್ ನಿಷ್ಕ್ರಿಯಗೊಂಡಿರುವುದು ಹಾಗೂ ಗೋವಾ ರಾಜ್ಯದಲ್ಲಿ ಆತನ ವಿರುದ್ಧ ಪ್ರಕರಣವೊಂದು ವಿಚಾರಣೆಯಲ್ಲಿರುವುದು ತಿಳಿದುಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಈ ಸಂದರ್ಭದಲ್ಲಿ ರೋಗಿ ಅಪರಾಧ ಪ್ರಕರಣದ ಭೀತಿಯಿಂದ ಆಸ್ಪತ್ರೆಯಿಂದ ನಾಪತ್ತೆಯಾದ ಘಟನೆ ನಡೆಯಿತು. ಬಳಿಕ ನಗರದಲ್ಲಿ ಸುತ್ತಾಡುತ್ತಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ರಾಮ್ ಅವರ ಆದೇಶದಂತೆ, ಗುಣಮುಖನಾದ ವಿದೇಶಿ ಪ್ರಜೆಗೆ ಕಾರ್ಕಳದ ಹೊಸಬೆಳಕು ಪುನರ್ವಸತಿ ಕೇಂದ್ರದಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಯಿತು. ರಷ್ಯಾದಲ್ಲಿರುವ ತನ್ನ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಲು ಸಹ ಆತನಿಗೆ ಅವಕಾಶ ಕಲ್ಪಿಸಲಾಯಿತು.
ಆಶ್ರಮದ ಸಂಚಾಲಕಿ ತನುಲಾ ತರುಣ್ ಅವರು ವಿದೇಶಿ ಪ್ರಜೆಗೆ ಊಟೋಪಚಾರ ನೀಡಿ ಸಹಕರಿಸಿದರು. ಅವರ ಭದ್ರತೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿತ್ತು.
ವಿದೇಶಿ ಪ್ರಜೆ ಸಂಪೂರ್ಣ ಚೇತರಿಸಿಕೊಂಡ ಬಳಿಕ ಉಡುಪಿ ಪೊಲೀಸರು ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಗೋವಾ ಪೊಲೀಸರಿಗೆ ಹಸ್ತಾಂತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುತುವರ್ಜಿಯಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳು ನಡೆದಿದ್ದು, ಕಾರ್ಯಾಚರಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ಸಹಕರಿಸಿದರು.







