ಗಂಗೊಳ್ಳಿ: ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋಟ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 66 ವರ್ಷದ ಮೀನುಗಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.
ಕೊಡೇರಿ ನಿವಾಸಿ ಜನಾರ್ಧನ ಖಾರ್ವಿ (66) ಅವರು ಶ್ರೀಗುರು ಪರ್ಸಿನ್ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದರು. 2025ರ ಡಿಸೆಂಬರ್ 7ರಂದು ಬೆಳಗಿನ ಜಾವ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಬಳಿಯ ಧಕ್ಕೆಯಲ್ಲಿ ಬೋಟ್‌ನ ಎತ್ತರದಲ್ಲಿ ರೋಪ್ ಕಟ್ಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬೋಟ್‌ನ ಮೇಲಿನಿಂದ ಕೆಳಗೆ ಬಿದ್ದಿದ್ದರು. ಪರಿಣಾಮ ತಲೆಗೆ ತೀವ್ರ ರಕ್ತಗಾಯವಾಗಿತ್ತು.
ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜನವರಿ 5ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಬಳಿಕ ಸೆ.13ರಂದು ಮತ್ತೆ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸೆ.23ರಂದು ಬಿಡುಗಡೆಯಾಗಿ ವೈದ್ಯರ ಸಲಹೆಯಂತೆ ಕೊಡೇರಿಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೆ.26ರಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಪರೀಕ್ಷಿಸಿದ ವೈದ್ಯಾಧಿಕಾರಿಗಳು ಬೆಳಗ್ಗೆ 12.10ಕ್ಕೆ ಜನಾರ್ಧನ ಖಾರ್ವಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.






