ಪಡುಬಿದ್ರಿ: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಸೆ.24ರಂದು ಪಡುಬಿದ್ರಿ ಜಂಕ್ಷನ್ ಬಳಿ ನಡೆದಿದೆ.
ಮೃತರನ್ನು ನಿರಂಜನ ಹೊಳ್ಳ (45) ಎಂದು ಗುರುತಿಸಲಾಗಿದೆ.
ಸೆ.24ರಂದು ಬೆಳಿಗ್ಗೆ 11:30ರ ಸುಮಾರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಜಂಕ್ಷನ್ ಬಳಿ ಉಡುಪಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ. ಕಾರು ಚಾಲಕ ಕಿರಣ್ ಕುಮಾರ್ ಅವರು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದರೆಂದು ದೂರಲಾಗಿದೆ.
ಈ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರಿನ ಎಡಭಾಗದ ಬಾಡಿ ಡಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ನಿರಂಜನ ಹೊಳ್ಳ ಅವರು ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಕಾರಿನ ಎಡಭಾಗದ ಹಿಂಬದಿ ಚಕ್ರದ ಅಡಿಗೆ ಅವರ ತಲೆ ಸಿಲುಕಿಕೊಂಡು ತೀವ್ರ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಚಿಕಿತ್ಸೆಗಾಗಿ ಪಡುಬಿದ್ರಿಯ ಸೌರಭ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







