ಉಡುಪಿ, ಸೆಪ್ಟೆಂಬರ್ 22: ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಹಾಗೂ ಇಲಾಖೆಯ ಇತರ ಯೋಜನೆಗಳಾದ ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿಗೆ ಸಮಾನಾಂತರವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಕರ ಸಾಧನೆಯನ್ನು ಗುರುತಿಸಿ ಪುರಸ್ಕರಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಪ್ರಶಸ್ತಿಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಜಿಲ್ಲೆಯ ಒಟ್ಟು 10 ಮಂದಿ ರೈತರಿಗೆ ತಲಾ ₹25,000 ಹಾಗೂ 7 ತಾಲೂಕುಗಳಲ್ಲಿ ತಾಲೂಕು ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗುವ ತಲಾ 5 ಮಂದಿ ರೈತರಿಗೆ ₹10,000 ಬಹುಮಾನ ನೀಡಲಾಗುವುದು.
ಪ್ರಶಸ್ತಿಗೆ ನಾಮನಿರ್ದೇಶನ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2026ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಮಾಹಿತಿಯನ್ನು ಭರ್ತಿ ಮಾಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಹತೆ ಮತ್ತು ಷರತ್ತುಗಳು
ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಈಗಾಗಲೇ ಸಮಾನಾಂತರ ಪ್ರಶಸ್ತಿಗಳನ್ನು ಪಡೆದಿರುವ ರೈತರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು.
ಅರ್ಜಿ ಸಲ್ಲಿಸುವ ರೈತರು ಸ್ವಂತ ಜಮೀನು ಹೊಂದಿದ್ದು, ಕನಿಷ್ಠ 1 ಎಕರೆ ವಿಸ್ತೀರ್ಣ ಹೊಂದಿರಬೇಕು.
ಸ್ವೀಕರಿಸಲಾದ ಅರ್ಜಿಗಳನ್ನು ಕ್ಷೇತ್ರ ಪರಿಶೀಲನಾ ತಂಡ ಪರಿಶೀಲಿಸಿ, ಸರಾಸರಿ ಅಂಕಗಳ ಜೇಷ್ಠತೆಯ ಆಧಾರದ ಮೇಲೆ ರೈತರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.
ಸಾವಯವ ಕೃಷಿಯನ್ನು ಅಳವಡಿಸಿಕೊಂಡಿರುವ ರೈತರು ಚಾಲ್ತಿಯಲ್ಲಿರುವ ವೈಯಕ್ತಿಕ ಸಾವಯವ ಪ್ರಮಾಣೀಕರಣ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು, ಆತ್ಮಯೋಜನೆ, ಉಡುಪಿ ಜಿಲ್ಲೆ, ಉಡುಪಿ.







