ಕಾರ್ಕಳ: ಸಾಣೂರು ಗ್ರಾಮದ ಪರ್ಪಲೆ ಪ್ರದೇಶದಲ್ಲಿ ಸೆಪ್ಟೆಂಬರ್ 21ರಂದು ಮಧ್ಯಾಹ್ನ 1:10ರ ಸುಮಾರಿಗೆ ಅಡಿಕೆ ಮರ ಹತ್ತಿ ಕಾಯಿ ಕೊಯ್ಯುತ್ತಿದ್ದ ಜೋಸೆಫ್ ಡಿಸೋಜ ಅವರು ಕೆಳಗೆ ಬಿದ್ದು ಕುತ್ತಿಗೆಗೆ ತೀವ್ರ ಸ್ವರೂಪದ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತರ ಪುತ್ರ ಅರುಣ್ ಜೋಯೆಲ್ ಡಿಸೋಜ (22), ನಿಟ್ಟೆ ಗ್ರಾಮ, ಕಾರ್ಕಳ, ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಜಾಗದ ಮಾಲೀಕರಾದ ಸ್ಟಾನ್ಲಿ ಡಿಸೋಜ ಅವರು ಕೆಲಸ ಮಾಡಿಸುತ್ತಿದ್ದ ಸಂದರ್ಭದಲ್ಲಿ ಜೋಸೆಫ್ ಡಿಸೋಜ ಅವರಿಗೆ ಸುರಕ್ಷತಾ ಬೆಲ್ಟ್, ಹೆಲ್ಮೆಟ್ ಮತ್ತು ಹಗ್ಗ ಒದಗಿಸದೆ, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ನಿರ್ಲಕ್ಷ್ಯದಿಂದಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







