ನವಿ ಮುಂಬೈ, ಸೆಪ್ಟೆಂಬರ್ 20, 2026, ಭಾನುವಾರ:ದೇಶದ ಪ್ರತಿಷ್ಠಿತ ಉದ್ಯಮಿಗಳಾದ ಶ್ರೀ ಅಶೋಕ್ ಹಿಂದುಜ ಅವರು ಉಡುಪಿ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರನ್ನು ಮುಂಬೈನ ತಮ್ಮ ಸ್ವಗೃಹಕ್ಕೆ ಆತ್ಮೀಯವಾಗಿ ಆಹ್ವಾನಿಸಿ, ಭಕ್ತಿಪೂರ್ವಕವಾಗಿ ಗುರುಸೇವೆ ಸಲ್ಲಿಸಿದರು.
ಪರಮಪೂಜ್ಯ ಶ್ರೀಪಾದಂಗಳವರು ತಮ್ಮ 53ನೇ ಚಾತುರ್ಮಾಸ್ಯ ವ್ರತವನ್ನು ನವಿ ಮುಂಬೈನ ಶ್ರೀಮಠದಲ್ಲಿ ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ, ಶ್ರೀಪಾದಂಗಳವರ ಶಿಷ್ಯರೂ ಆಗಿರುವ ಖ್ಯಾತ ಉದ್ಯಮಿ ಶ್ರೀ ಅಶೋಕ್ ಹಿಂದುಜ ಅವರು ವಿಶೇಷವಾಗಿ ಆಹ್ವಾನಿಸಿ ಆತಿಥ್ಯ ವಹಿಸಿದರು.
ಶ್ರೀಪಾದಂಗಳವರಿಂದ ‘ಕೋಟಿ ಗೀತಾ ಲೇಖನ ಯಜ್ಞ’ದ ದೀಕ್ಷೆ ಪಡೆದಿರುವ ಶ್ರೀ ಅಶೋಕ್ ಹಿಂದುಜ ಅವರು, ತಮ್ಮ ಜೀವನದ ಯಶಸ್ಸಿಗೆ ಗುರುಗಳ ಸೇವೆ ಮತ್ತು ಆಶೀರ್ವಾದವೇ ಪ್ರಮುಖ ಕಾರಣವೆಂದು ಭಕ್ತಿಪೂರ್ವಕವಾಗಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಪಾದಂಗಳವರು ಹಿಂದುಜ ಕುಟುಂಬದ ದೇಶಸೇವೆ, ಸಮಾಜಮುಖಿ ಚಟುವಟಿಕೆಗಳು ಹಾಗೂ ಜನಪರ ಕಾರ್ಯಗಳನ್ನು ಶ್ಲಾಘಿಸಿದರು. ಕುಟುಂಬವು ಇನ್ನಷ್ಟು ಅಭಿವೃದ್ಧಿ ಹೊಂದಿ, ಸಮಾಜ ಮತ್ತು ದೇಶದ ಸೇವೆಯಲ್ಲಿ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದು ಆಶೀರ್ವದಿಸಿದರು.







