ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮುಲ್ಲಡ್ಕ ಗ್ರಾಮದ ಕೊಡಿಮಾರಿನಲ್ಲಿ ಸೆ.18ರಂದು ನಡೆದಿದೆ.
ಮೃತರನ್ನು ವಸಂತ ಮೂಲ್ಯ (73) ಎಂದು ಗುರುತಿಸಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ವಸಂತ ಮೂಲ್ಯ ಅವರು ಮುಂಡ್ಕೂರಿನಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ಕೊಡಿಮಾರು ಬಸ್ ನಿಲ್ದಾಣದಲ್ಲಿ ಇಳಿದು, ರಸ್ತೆಯ ಎಡಬದಿಯಲ್ಲಿ ತಮ್ಮ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಸ್ವಿಫ್ಟ್ ಕಾರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ವಸಂತ ಮೂಲ್ಯ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ವಸಂತ ಮೂಲ್ಯ ಅವರು ರಸ್ತೆಗೆ ಬಿದ್ದು, ಬಲಗಾಲು, ಮುಖ, ಬಲಕೈ ಹಾಗೂ ತಲೆಗೆ ಗಂಭೀರ ರಕ್ತಗಾಯಗಳಾಗಿವೆ. ತಕ್ಷಣ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಘಾತಕ್ಕೆ ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರೂಕ ಚಾಲನೆಯೇ ಕಾರಣವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೂಚನೆ: ಈ ವರದಿ ಪೊಲೀಸ್ ದೂರಿನಲ್ಲಿ ನೀಡಲಾದ ಮಾಹಿತಿಯನ್ನು ಆಧರಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.







