ಮಣಿಪಾಲ, ಸೆಪ್ಟೆಂಬರ್ 17, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿಯನ್ನು ಸ್ಥಾಪಿಸಿದೆ. ಸುಸ್ಥಿರತೆ, ಪರಿಸರ ಸಂರಕ್ಷಣೆ, ಹವಾಮಾನ ಕ್ರಮಗಳು ಹಾಗೂ ಹೊಣೆಯರಿತ ಕ್ಯಾಂಪಸ್ಸುಗಳನ್ನು ಅಭಿವೃದ್ಧಿ ಪಡಿಸಿರುವ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಆಶಯವಾಗಿದೆ. ಮಾಹೆಯ ವಾಲಂಟಿಯರ್ ಸರ್ವಿಸಸ್ ಆರ್ಗನೈಸೇಷನ್ (ವಿಎಸ್‌ಓ) ಗುರುವಾರ ಮಣಿಪಾಲದಲ್ಲಿ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆಯಲ್ಲಿ ಯುವ ಜನತೆ : ರಾಷ್ಟ್ರೀಯ ಸಮಾವೇಶದ 7ನೆಯ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ವಿಎಸ್ಓ ಭಾರತದಲ್ಲಿನ ವಿಶ್ವವಿದ್ಯಾಲಯ ಕೇಂದ್ರಿತ ಅತಿದೊಡ್ಡ ವಿದ್ಯಾರ್ಥಿ ಸ್ವಯಂಸೇವಕ ಸಂಘಟನೆಗಳಲ್ಲಿ ಒಂದಾಗಿದೆ.
ಉದ್ಘಾಟನಾ ಭಾಷಣದಲ್ಲಿ ಪ್ರಶಸ್ತಿಯ ಸ್ಥಾಪನೆಯನ್ನು ಘೋಷಿಸಿದ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, ‘ಇಂದು ನಾವು ಕೇವಲ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡುತ್ತಿಲ್ಲ. ಸುಸ್ಥಿರತೆಯನ್ನು ಪ್ರಗತಿಯ ಕೇಂದ್ರಬಿಂದುವಾಗಿರಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳನ್ನು ಪ್ರೇರೇಪಿಸುವ ಒಂದು ಚಳವಳಿಯಾಗಿ ರೂಪುಗೊಳ್ಳಬೇಕು ” ಎಂಬ ಆಶಯ ವ್ಯಕ್ತಪಡಿಸಿದರು.
“ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನಲ್ಲಿ ಸುಸ್ಥಿರತೆಯು ಕೇವಲ ಸ್ವಂತ ಕ್ಯಾಂಪಸ್‌ಗೆ ಸೀಮಿತವಾಗದೆ ಸಾರ್ವರ್ತ್ರಿಕ ನೆಲೆಯಲ್ಲಿ ವಿಕಸನಗೊಂಡಿದೆ. ಇಂಧನ, ನೀರು, ತ್ಯಾಜ್ಯ, ಜೀವವೈವಿಧ್ಯ, ಸಂಚಾರ ವ್ಯವಸ್ಥೆ ಹಾಗೂ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವ ಬಗೆಯಲ್ಲಿ ನಾವು ಮಾದರಿಯಾಗುತ್ತಿದ್ದೇವೆ. ಸುಸ್ಥಿರತೆ ನಮ್ಮ ಸಂಸ್ಥೆಯ ಡಿಎನ್‌ಎಯಲ್ಲೇ ಅಡಕವಾಗಿದೆ” ಎಂದು ಅವರು ಹೇಳಿದರು.
ಪದ್ಮಭೂಷಣ ಪುರಸ್ಕೃತರು ಹಾಗೂ ಮಾಹೆಯ ಛಾನ್ಸಲರ್ ಡಾ. ರಾಮದಾಸ್ ಎಂ. ಪೈ ಅವರ 91ನೇ ಜನ್ಮದಿನದ ಗೌರವಾರ್ಥ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಸಾಮಾಜಿಕ ಪರಿವರ್ತನೆಯ ಕೌಶಲಗಳು-‘ಸ್ಕಿಲ್ಸ್ ಆಫ್ ಸೋಶಿಯಲ್ ಛೇಂಜ್’ ಎಂಬ ವಿಷಯಕೇಂದ್ರಿತವಾಗಿ ಸಮಾವೇಶ ಸಂಪನ್ನಗೊಂಡಿತು. 600ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಯುವಜನರು, ಸ್ವಯಂಸೇವಕರು, ಸಾಮಾಜಿಕ ಬದಲಾವಣೆಯ ಹರಿಕಾರರು, ಶಿಕ್ಷಣ ತಜ್ಞರು, ವೃತ್ತಿಪರರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಯುವಜನರು ಕೇವಲ ಭವಿಷ್ಯದ ನಾಯಕರಲ್ಲ, ಅವರು ವರ್ತಮಾನದ ಪರಿವರ್ತನೆಯ ಹರಿಕಾರರು. ಸೂಕ್ತ ಕೌಶಲಗಳು ಮತ್ತು ಅವಕಾಶಗಳೊಂದಿಗೆ ಅವರ ಸಾಮರ್ಥ್ಯ ಹಾಗೂ ಆಲೋಚನೆಗಳನ್ನು ಜಾಗೃತಿಗೊಳಿಸಿದಾಗ, ಸಮಾಜದಲ್ಲಿ ಅರ್ಥಪೂರ್ಣ ಪ್ರಭಾವ ಸಾಧ್ಯ. ‘ಸಾಮಾಜಿಕ ಪರಿವರ್ತನೆಯಲ್ಲಿ ಯುವಜನತೆ’ ವಿಷಯದ ಕುರಿತ ರಾಷ್ಟ್ರೀಯ ಸಮಾವೇಶವು ಯುವಶಕ್ತಿಯನ್ನು ಪ್ರೋತ್ಸಾಹಿಸುವ ಆಶಯವನ್ನು ಪ್ರತಿಬಿಂಬಿಸುತ್ತದೆ. ಜಾಗೃತಿಯಿಂದ ಸಾಮರ್ಥ್ಯದತ್ತ, ಸಾಮರ್ಥ್ಯದಿಂದ ಕಾರ್ಯದತ್ತ ಸಾಗುವ ನಿರಂತರ ಪಯಣವನ್ನು ಇದು ಪ್ರತಿಬಿಂಬಿಸಿದೆ.. ಸುಮಾರು 600 ಯುವಜನರು ಸಕ್ರಿಯವಾಗಿ ಭಾಗಿಯಾದದ್ದು ಈ ಸಮಾವೇಶದ ಯಶಸ್ಸಿಗೆ ಸಾಕ್ಷಿಯಾಗಿದೆ ” ಎಂದು ಹೇಳಿದರು.
ಮಾಹೆಯ ವಿವಿಧ ಘಟಕ ಸಂಸ್ಥೆಗಳ ವತಿಯಿಂದ ವಿವಿಧ ಕೌಶಲ ತರಬೇತಿ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಇವುಗಳಲ್ಲಿ ಸಿಪಿಆರ್, ಪ್ರಥಮ ಚಿಕಿತ್ಸೆ, ಪಾಕಕಲೆ, ಆತ್ಮರಕ್ಷಣೆ, ಛಾಯಾಗ್ರಹಣ, ಡಿಸೈನ್ ಥಿಂಕಿಂಗ್, ಧ್ಯಾನ ಮತ್ತು ಕ್ಷೇಮಾಭಿವೃದ್ಧಿ ಹಾಗೂ ದೈಹಿಕ ಚಟುವಟಿಕೆ ಮೌಲ್ಯಮಾಪನ ಸೇರಿದಂತೆ ಹಲವು ವಿಷಯಗಳು ಒಳಗೊಂಡಿದ್ದವು. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಅಗತ್ಯವಾದ ಕೌಶಲ, ಆತ್ಮವಿಶ್ವಾಸ ಮತ್ತು ಅವಕಾಶಗಳನ್ನು ಯುವಜನರಿಗೆ ಒದಗಿಸುವ ಮಹತ್ವವನ್ನು ಈ ಉಪಕ್ರಮವು ಎತ್ತಿ ತೋರಿಸಿತು.
ಈ ವರ್ಷದ ಸಮಾವೇಶವು ಅನುಭವಾಧಾರಿತ ಕಲಿಕೆಗೆ ಒತ್ತು ನೀಡಲಿದ್ದು, ‘ಈ ವರ್ಷದ ಯೂತ್ ಇನ್ ಸೋಶಿಯಲ್ ಛೇಂಜ್’ ವಿಷಯ ಕೇಂದ್ರಿತ ಕಾರ್ಯಕ್ರಮವು ‘ಜೀವನಕ್ಕೆ ಉಪಯೋಗವಾಗುವ ಕೌಶಲವನ್ನು ಕಲಿಯಿರಿ’ ಎಂಬ ಸಂದೇಶವನ್ನು ಹೊಂದಿದೆ. ಮಾಹೆಯ ಘಟಕ ಸಂಸ್ಥೆಗಳ ವತಿಯಿಂದ ವೈವಿಧ್ಯಮಯ ಕೌಶಲ್ಯ ತರಬೇತಿ ಅಧಿವೇಶನಗಳನ್ನು ಆಯೋಜಿಸಲಾಗುತ್ತಿದ್ದು, ಸಿಪಿಆರ್, ಪ್ರಥಮ ಚಿಕಿತ್ಸೆ, ಪಾಕಕಲೆ, ಆತ್ಮರಕ್ಷಣೆ, ಛಾಯಾಗ್ರಹಣ, ಯೋಚನೆಯ ಕ್ರಮ (ಡಿಸೈನ್ ಥಿಂಕಿಂಗ್), ಧ್ಯಾನ ಮತ್ತು ಕ್ಷೇಮಾಭಿವೃದ್ಧಿ,I ದೈಹಿಕ ಚಟುವಟಿಕೆಗಳನ್ನು ನಿಭಾಯಿಸುವುದು- ಮೊದಲಾದುವು ಸೇರಿದಂತೆ ಹಲವು ವಿಷಯಗಳ ಕುರಿತ ಪ್ರಾತ್ಯಕ್ಷಿಕೆ, ತರಬೇತಿಗಳು ನಡೆಯಲಿವೆ. ಈ ಸಮಾವೇಶದಲ್ಲಿ ಪೋಸ್ಟರ್ ಪ್ರಸ್ತುತಿ ಮತ್ತು ಜ್ಞಾನಮಾದರಿಗಳ ಪ್ರದರ್ಶನಗಳು ಆಯೋಜನೆಗೊಂಡಿವೆ.
ವಿಎಸ್ಓ ಸಂಚಾಲಕ ಡಾ. ಪ್ರವೀಣ್ ಕುಮಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಎಸ್‌ಓ ಸಹ-ಸಂಚಾಲಕ ಡಾ. ಶ್ರೀನಿವಾಸ್ ಹೆಬ್ಬಾರ್ ಅವರು ವಂದನಾರ್ಪಣೆ ಮಾಡಿದರು. ಎವ್‌ರಿಲ್ ಜಾಕ್‌ಲಿನ್ ಫೆರ್ನಾಂಡೀಸ್ ಅವರು ಕಾರ್ಯಕ್ರಮ ನಿರ್ವಹಿಸಿದರು.







