ಮಲ್ಪೆ, ಸೆ.11: ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಘಟನೆ ಸೆಪ್ಟೆಂಬರ್ 8ರಂದು ಮಲ್ಪೆ ಸಮುದ್ರದಲ್ಲಿ ನಡೆದಿದೆ.
ಸಾಸ್ತಾನ ಅಂಚೆ, ಸಾಲಿಗ್ರಾಮದ ಮೋಪುಡು ನಿವಾಸಿ ಪ್ರಕಾಶ್ (37) ಅವರ ಮಾಲೀಕತ್ವದ 2556ನೇ “ಜಯಗಣೇಶ” ಮೀನುಗಾರಿಕಾ ಬೋಟ್ ಸೆಪ್ಟೆಂಬರ್ 8ರಂದು ಸಂಜೆ ಸುಮಾರು 5 ಗಂಟೆಗೆ ಮಲ್ಪೆಯಿಂದ ಕಾಪು ಕಡೆಗೆ ಮೀನುಗಾರಿಕೆಗೆ ತೆರಳಿತ್ತು.
ರಾತ್ರಿ ಸುಮಾರು 8.30ರ ವೇಳೆಗೆ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸಕ್ಕೆ ತೆರಳಿದ್ದ ಕೊಪ್ಪಳ ಜಿಲ್ಲೆಯ ಅಶೋಕ (42) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






