ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಳೆಬೈಲು ಅವರನ್ನು ನೇಮಕ ಮಾಡಿ ಎಐಸಿಸಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ. ಕಿಶನ್ ಹೆಗ್ಡೆ ಅವರು ಈ ಹಿಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಿಶನ್ ಹೆಗ್ಡೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಬಳಿಕ ಆ ನೇಮಕಾತಿಗೆ ತಡೆ ನೀಡಲಾಗಿತ್ತು.
ಇತ್ತೀಚೆಗೆ ಎಐಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಿ, ಸಂಘಟನ್ ಅಭಿಯಾನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು. ವೀಕ್ಷಕರು ತಮ್ಮ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಕಿಶನ್ ಹೆಗ್ಡೆ ಕೊಳ್ಳೆಬೈಲು ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.






