ಉಡುಪಿ: ಬ್ಯಾಂಕ್ ಖಾತೆಯಿಂದ ಖಾತೆದಾರರ ಗಮನಕ್ಕೆ ಬಾರದಂತೆ ₹4.40 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿ ವಂಚಿಸಿರುವ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಿಠಲ ಅವರು ಅಲೆವೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ₹6 ಲಕ್ಷ ಹಣವನ್ನು ಇರಿಸಿದ್ದರು. ಈ ಹಣವನ್ನು ಬ್ಯಾಂಕ್ ಆಫ್ ಬರೋಡಾ ಖಾತೆಗೆ ವರ್ಗಾವಣೆ ಮಾಡುವ ಉದ್ದೇಶದಿಂದ ದಿನಾಂಕ 22/06/2026ರಂದು ಬ್ಯಾಂಕಿಗೆ ತೆರಳಿ ಉಪಶಾಖಾಧಿಕಾರಿಯವರಿಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳಿಗೆ ಸಹಿ ಮಾಡಿ ಬಂದಿದ್ದರು.
ನಂತರ ಕಾರಣಾಂತರಗಳಿಂದ ಮಗಳ ಮನೆಯಾದ ವಿಶಾಖಪಟ್ಟಣಕ್ಕೆ ತೆರಳಿದ್ದ ವಿಠಲ ಅವರು, ಸೆಪ್ಟೆಂಬರ್ 8ರಂದು ಪುನಃ ಯೂನಿಯನ್ ಬ್ಯಾಂಕ್‌ಗೆ ತೆರಳಿ ಖಾತೆಯ ಕುರಿತು ವಿಚಾರಿಸಿದಾಗ, ಅವರ ಉಳಿತಾಯ ಖಾತೆಯಿಂದ ₹4,40,000 ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.
ತಮ್ಮ ಗಮನಕ್ಕೆ ಬಾರದಂತೆ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಖಾತೆಯಿಂದ ₹4.40 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ವಿಠಲ ಅವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







