ಪಡುಬಿದ್ರಿ: ಎಲ್ಲೂರು ಗ್ರಾಮದ ನಿವಾಸಿ ಹರ್ಷಲ್ ಅಮೀನ್ (32) ಎಂಬವರು ನಾಪತ್ತೆಯಾಗಿರುವ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷಲ್ ಅಮೀನ್ ಅವರು ಸುಮಾರು 5 ವರ್ಷಗಳ ಹಿಂದೆ ಮಂಜುಳಾ (35) ಅವರನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿ ಜೊತೆಯಾಗಿ ವಾಸಿಸುತ್ತಿದ್ದರು. ಆಗಸ್ಟ್ 27ರಂದು ಬೆಳಗ್ಗೆ ಪತ್ನಿ ಮಂಜುಳಾ ಅವರನ್ನು ಬೈಕ್‌ನಲ್ಲಿ ಕೆಲಸಕ್ಕೆಂದು ಕರೆದುಕೊಂಡು ಬಂದ ಹರ್ಷಲ್, ಉಚ್ಚಿಲ ಪೇಟೆಯಲ್ಲಿ ಅವರನ್ನು ಇಳಿಸಿ ಮನೆಗೆ ವಾಪಸಾಗಿದ್ದರು.
ನಂತರ ಹರ್ಷಲ್ ಅವರು ತಾಯಿ ರಾಜಶ್ರೀ ಅವರೊಂದಿಗೆ ಮುಂಬೈನಲ್ಲಿರುವ ಮಾವನ ಮನೆಗೆ ತೆರಳಿ ಬರುವುದಾಗಿ ಪತ್ನಿಗೆ ತಿಳಿಸಿದ್ದರು. ಸೆಪ್ಟೆಂಬರ್ 2ರಂದು ಮುಂಬೈನಿಂದ ವಾಪಸಾಗಿ ತಾಯಿಯನ್ನು ಉಡುಪಿ ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿರುವುದಾಗಿ ರಾಜಶ್ರೀ ಅವರು ಮಂಜುಳಾಗೆ ತಿಳಿಸಿದ್ದರು.
ಅದೇ ದಿನ ರಾತ್ರಿ 11:26ರ ಸುಮಾರಿಗೆ ಹರ್ಷಲ್ ಪತ್ನಿಗೆ ಕರೆ ಮಾಡಿ ತಾನು ಕಾಪುವಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದು, ವಾಟ್ಸಪ್‌ನಲ್ಲಿಯೂ ಇದೇ ರೀತಿಯ ಸಂದೇಶ ಕಳುಹಿಸಿದ್ದರು. ಆದರೆ ಬಳಿಕ ಮನೆಗೆ ವಾಪಸಾಗಿಲ್ಲ.
ಕುಟುಂಬಸ್ಥರು ಹಾಗೂ ಸಂಬಂಧಿಕರು ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರೂ ಹರ್ಷಲ್ ಅಮೀನ್ ಪತ್ತೆಯಾಗಿಲ್ಲ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





