ಮಣಿಪಾಲ, ಸೆಪ್ಟೆಂಬರ್ 04, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಮತ್ತು ಸಿಡ್ನಿ ವಿಶ್ವವಿದ್ಯಾಲಯ (ಯುಎಸ್‌ವೈಡಿ) ಶಿಕ್ಷಣ, ಸಂಶೋಧನೆ, ನಾವೀನ್ಯ ಹಾಗೂ ಶೈಕ್ಷಣಿಕ ವಿನಿಮಯ ಕ್ಷೇತ್ರಗಳಲ್ಲಿ ತಮ್ಮ ಸಹಭಾಗಿತ್ವವನ್ನು ಮತ್ತಷ್ಟು ದೃಢಪಡಿಸುವ ಆಶಯದಲ್ಲಿ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ.
ಮುಂಬೈಯ ಆಸ್ಟ್ರೇಲಿಯಾ ಕಾನ್ಸುಲೇಟ್-ಜನರಲ್ ಅವರ ನಿವಾಸದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಮಾಹೆಯ ಉಪಕುಲಪತಿ ಡಾ. ಶರತ್ ಕೆ. ರಾವ್ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಉಪಕುಲಪತಿ ಪ್ರೊ. ಮೈಕ್ ರಯಾನ್ ಅವರು ಸೆಪ್ಟೆಂಬರ್ 2, 2026ರಂದು ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಒಎಎಂ ಹಾಗೂ ಮುಂಬೈನಲ್ಲಿರುವ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಪಾಲ್ ಮರ್ಫಿ ಅವರ ಸಮ್ಮುಖದಲ್ಲಿ ಸಹಿ ಹಾಕಿದರು.
ಈ ಒಪ್ಪಂದವು ಮಾಹೆ ಮತ್ತು ಸಿಡ್ನಿ ವಿಶ್ವವಿದ್ಯಾಲಯ ಕೆಳಗಿನ ಐದು ಪ್ರಮುಖ ಕ್ಷೇತ್ರಗಳಲ್ಲಿ ಸಹಭಾಗಿತ್ತ್ವನ್ನು ಸಾಧ್ಯವಾಗಿಸುತ್ತದೆ:
• ಉನ್ನತ ಸಂಶೋಧನ ಕಾರ್ಯಕ್ರಮ
• ಜಂಟಿ ಸಂಶೋಧನ ಅನುದಾನ ಮತ್ತು ಸಂಶೋಧನ ಶಿಕ್ಷಣ
• ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಅಂತಾರಾಷ್ಟ್ರೀಯ ವಿನಿಮಯವನ್ನು ವಿಸ್ತರಣೆ
• ನಾವೀನ್ಯ ಮತ್ತು ಜ್ಞಾನದ ಪ್ರಾಯೋಗಿಕ ಅನ್ವಯ
• ಜಂಟಿ ನಿರ್ವಹಣೆ ಮತ್ತು ವ್ಯವಸ್ಥಿತ ಫಲಿತಾಂಶ
ಭಾರತ ಮತ್ತು ಆಸ್ಟ್ರೇಲಿಯಾದ ವಿದ್ಯಾರ್ಥಿಗಳು, ಸಂಶೋಧಕರು, ಆರೋಗ್ಯ ವೃತ್ತಿಪರರು, ಉದ್ಯಮಿಗಳು ಹಾಗೂ ಕೈಗಾರಿಕಾ ಪಾಲುದಾರರಿಗೆ ಪರಸ್ಪರ ಸಂವಾದ ನಡೆಸಲು ಈ ಒಡಂಬಡಿಕೆಯಿಂದ ಸಾಧ್ಯವಾಗಿದೆ. ಅಲ್ಲದೆ, ಇದು, ಸಂಶೋಧನ ಫಲಿತಾಂಶಗಳನ್ನು ಸಮಾಜಕ್ಕೆ ಉಪಯುಕ್ತವಾಗುವಂತೆ ಪರಿವರ್ತಿಸಲು ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.
ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್, ಗೌರವಾನ್ವಿತರಾದ ಶ್ರೀ ಫಿಲಿಪ್ ಗ್ರೀನ್ ಓಎಎಂ ಅವರು ಮಾತನಾಡಿ, “ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧವು ದೃಢವಾಗಿದೆ. ಶಿಕ್ಷಣ, ಸಂಶೋಧನೆ, ನಾವೀನ್ಯ ಮತ್ತು ಪರಸ್ಪರ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ನಿರಂತರವಾಗಿ ವೃದ್ಧಿಸಲು ಇದು ಪೂರಕವಾಗಿದೆ. ಈ ಸಹಯೋಗವು ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಅವಕಾಶವನ್ನು ಒದಗಿಸುತ್ತದೆ. ವಿಶೇಷವಾಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ವಿದ್ಯಾರ್ಥಿಗಳು, ಬೋಧಕವರ್ಗ ಹಾಗೂ ಸಂಶೋಧಕರಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವಲ್ಲಿ ಇದು ಪೂರಕವಾಗಿಲಿದೆ’ ಎಂದು ಹೇಳಿದರು.
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, “ ಮಾಹೆ ಮತ್ತು ಸ್ಡ್ನಿ ವಿಶ್ವವಿದ್ಯಾನಿಲಯದ ನಡುವಿನ ಒಪ್ಪಂದವು ಸಂಶೋಧನ ಮತ್ತು ಶೈಕ್ಕ್ಷಣಿಕ ಕ್ಷೇತ್ರದ ಮಹತ್ವದ ಹೆಜ್ಜೆಯಾಗಿದೆ. ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕವರ್ಗಕ್ಕೆ ಪರಿವರ್ತನಾತ್ಮಕ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಜಾಗತಿಕ ಮಟ್ಟದ ಈ ಮಹತ್ತ್ವದ ಒಪ್ಪಂದವನ್ನು ಸಾಧ್ಯವಾಗಿಸಿದ ಬಗ್ಗೆ ಮಾಹೆ ಅಭಿಮಾನ ಪಡುತ್ತಿದೆ’ ಎಂದರು.
ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧನ ವಿಭಾಗದ ಉಪಕುಲಪತಿ ಪ್ರೊ. ಮೈಕ್ ರಯಾನ್ ಅವರು ಮಾತನಾಡಿ, “ಸಿಡ್ನಿ ವಿಶ್ವವಿದ್ಯಾಲಯ ಮತ್ತು ಮಾಹೆಯ ದೀರ್ಘಕಾಲದ ಸಂಬಂಧಕ್ಕೆ ಈ ಒಡಂಬಡಿಕೆ ಪೂರಕವಾಗಿದೆ. ಈ ಹೊಸ ಒಪ್ಪಂದವು ಜಂಟಿ ಸಂಶೋಧನೆ, ಡಾಕ್ಟರಲ್ ಶಿಕ್ಷಣ, ವಿದ್ಯಾರ್ಥಿ–ಬೋಧಕವರ್ಗದ ವಿನಿಮಯ ಹಾಗೂ ನಾವೀನ್ಯದ ಮೂಲಕ ಸಹಭಾಗಿತ್ವ ವಿಸ್ತರಣೆ ಇವುಗಳನ್ನು ಬೆಂಬಲಿಸುತ್ತದೆ. ಅಂತಿಮವಾಗಿ ಸಮಾಜಕ್ಕೆ ಸದುಪಯೋಗವಾಗುವ ಫಲಿತಾಂಶವನ್ನು ಕಂಡುಕೊಳ್ಳುವುದು ನಮ್ಮ ಆಶಯವಾಗಿದೆ” ಎಂದು ಹೇಳಿದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶೈಕ್ಷಣಿಕ ಸಂಬಂಧಗಳನ್ನು ಉತ್ತೇಜಿಸುವುದು, ಜಾಗತಿಕ ಸಂಶೋಧನಾ ಸಹಯೋಗವನ್ನು ಬಲಪಡಿಸುವುದು ಹಾಗೂ ನವೀನತೆ ಆಧಾರಿತ ಸಹಭಾಗಿತ್ವದ ಅವಕಾಶಗಳನ್ನು ಸೃಷ್ಟಿಸುವ ದಿಸೆಯಲ್ಲಿ ಈ ಪಾಲುದಾರಿಕೆ ಒಂದು ಮಹತ್ವದ ಮೈಲುಗಲ್ಲುಗಳಾಗಲಿವೆ.







