ಉಡುಪಿ: ಜಗದೊಡೆಯ ಶ್ರೀಕೃಷ್ಣನ ಜನ್ಮೋತ್ಸವಕ್ಕೆ ಉಡುಪಿ ನಗರಿ ಸಜ್ಜಾಗಿದೆ.
ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 5ರಂದು ವೈಭವದ ವಿಟ್ಲಪಿಂಡಿ–ಕೃಷ್ಣಲೀಲೋತ್ಸವ ನಡೆಯಲಿದ್ದು, ಕೃಷ್ಣನ ನಾಡಿನಲ್ಲಿ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಸಡಗರ ಕಳೆಗಟ್ಟಿದೆ.
ಅಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ರಾತ್ರಿ ಚಂದ್ರೋದಯದ ಬಳಿಕ ಕೃಷ್ಣನಿಗೆ ಮಹಾಪೂಜೆ ಹಾಗೂ ಕೃಷ್ಣಾರ್ಘ್ಯ ಪ್ರಧಾನ ನಡೆಯಲಿದೆ. ಸಹಸ್ರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ವಿಟ್ಲಪಿಂಡಿಗೆ ಭರ್ಜರಿ ತಯಾರಿ
ಅಷ್ಟಮಿ ಸಂಭ್ರಮದ ಬೆನ್ನಲ್ಲೇ ಮರುದಿನ ನಡೆಯಲಿರುವ ವಿಟ್ಲಪಿಂಡಿಗಾಗಿ ಮಠದ ಅಡುಗೆಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಭಕ್ತರಿಗೆ ವಿತರಿಸಲು ಬೃಹತ್ ಪ್ರಮಾಣದಲ್ಲಿ ಚಕ್ಕುಲಿ, ವಿವಿಧ ಬಗೆಯ ಉಂಡೆಗಳು ಹಾಗೂ ಇತರ ಪ್ರಸಾದ ತಿನಿಸುಗಳನ್ನು ತಯಾರಿಸಲಾಗುತ್ತಿದೆ.
ಸುಮಾರು 1.5 ಲಕ್ಷ ಚಕ್ಕುಲಿ, ತಲಾ ಸುಮಾರು 30 ಸಾವಿರದಷ್ಟು ವಿವಿಧ ಬಗೆಯ ಉಂಡೆಗಳು ಸಿದ್ಧವಾಗುತ್ತಿದ್ದು, ಸುಮಾರು 20 ಕ್ವಿಂಟಾಲ್ ಬೆಲ್ಲ ಹಾಗೂ 7 ಕ್ವಿಂಟಾಲ್ ಸಕ್ಕರೆ ಬಳಸಿ ವಿವಿಧ ಭಕ್ಷ್ಯತಿನಿಸುಗಳನ್ನು ತಯಾರಿಸಲಾಗುತ್ತಿದೆ.
ಈ ಬೃಹತ್ ಪ್ರಸಾದ ತಯಾರಿಯಲ್ಲಿ ಸುಮಾರು 80 ಬಾಣಸಿಗರು ನಿರತರಾಗಿದ್ದಾರೆ.



ಮೊಸರುಕುಡಿಕೆಗೆ ಮಡಿಕೆಗಳ ಸಿಂಗಾರ
ವಿಟ್ಲಪಿಂಡಿಯ ಪ್ರಮುಖ ಆಕರ್ಷಣೆಯಾದ ಸಾಂಪ್ರದಾಯಿಕ ಮೊಸರುಕುಡಿಕೆಗೂ ಸಿದ್ಧತೆ ನಡೆದಿದೆ.
ಮೊಸರುಕುಡಿಕೆಯಲ್ಲಿ ಬಳಸುವ ಮಡಿಕೆಗಳಿಗೆ ವಿವಿಧ ಬಣ್ಣಗಳನ್ನು ಹಚ್ಚಿ ಆಕರ್ಷಕವಾಗಿ ಸಿದ್ಧಪಡಿಸಲಾಗುತ್ತಿದೆ. ಉತ್ಸವದ ದಿನ ಗೊಲ್ಲರಿಂದ ನಡೆಯುವ ಸಾಂಪ್ರದಾಯಿಕ ಮೊಸರುಕುಡಿಕೆ ಜನರ ಗಮನ ಸೆಳೆಯಲಿದೆ.

ಹುಲಿವೇಷ, ಜಾನಪದ ಕಲಾತಂಡಗಳ ಅಬ್ಬರ
ವಿಟ್ಲಪಿಂಡಿ ಉತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರುವ ಹುಲಿವೇಷ ತಂಡಗಳು ಕೂಡ ಸಂಭ್ರಮಕ್ಕೆ ಸಜ್ಜಾಗಿವೆ.
ತಾಳ–ಮದ್ದಳೆಯ ನಾದಕ್ಕೆ ಹುಲಿವೇಷಧಾರಿಗಳ ಕುಣಿತ, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಹಾಗೂ ಮೆರವಣಿಗೆ ಉಡುಪಿಯ ರಥಬೀದಿಗೆ ಮತ್ತಷ್ಟು ಕಳೆ ತರಲಿದೆ.
ಸಾಂಪ್ರದಾಯಿಕ ಹುಲಿವೇಷ ಸ್ಪರ್ಧೆಯ ವಿಜೇತರಿಗೆ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರು ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವುದು ವಿಶೇಷ.
ರಥಬೀದಿಯಲ್ಲಿ ಹೂವಿನ ವ್ಯಾಪಾರ ಜೋರು
ಇತ್ತ ಉಡುಪಿಯ ರಥಬೀದಿಯಲ್ಲೂ ಕೃಷ್ಣಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ.
ರಸ್ತೆಯುದ್ದಕ್ಕೂ ಹೂವಿನ ಅಂಗಡಿಗಳು ತೆರೆದಿದ್ದು, ಕೃಷ್ಣನಿಗೆ ಅರ್ಪಿಸಲು ಹೂವು ಖರೀದಿಸಲು ಭಕ್ತರು ಆಗಮಿಸುತ್ತಿದ್ದಾರೆ. ಕೃಷ್ಣಮಠದತ್ತ ಹರಿದುಬರುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು, ರಥಬೀದಿ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಜನಸಂದಣಿ ಕಂಡುಬರುತ್ತಿದೆ.
ಚಿನ್ನದ ರಥದಲ್ಲಿ ಕೃಷ್ಣನ ರಥೋತ್ಸವ
ಸೆಪ್ಟೆಂಬರ್ 5ರಂದು ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ರಥೋತ್ಸವ ನಡೆಯಲಿದೆ.
ಗೊಲ್ಲರಿಂದ ಸಾಂಪ್ರದಾಯಿಕ ಮೊಸರುಕುಡಿಕೆ, ಹುಲಿವೇಷ, ಜಾನಪದ ಕಲಾತಂಡಗಳ ಮೆರವಣಿಗೆ ಹಾಗೂ ಮಲ್ಲಯುದ್ಧ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ವಿಟ್ಲಪಿಂಡಿ ಸಂಭ್ರಮಕ್ಕೆ ಮೆರುಗು ನೀಡಲಿವೆ.
ಮಹಾಪೂಜೆಯ ಬಳಿಕ ಊರ–ಪರವೂರಿನಿಂದ ಆಗಮಿಸುವ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸ್ಥಳೀಯ ಶಾಲೆಗಳಿಗೂ ಜನ್ಮಾಷ್ಟಮಿ ಪ್ರಸಾದ ವಿತರಿಸಲು ಸಿದ್ಧತೆ ಮಾಡಲಾಗಿದೆ.
ಅಷ್ಟಮಿಯ ಆಧ್ಯಾತ್ಮಿಕ ಸಂಭ್ರಮದಿಂದ ಆರಂಭವಾಗಿ, ವಿಟ್ಲಪಿಂಡಿಯ ಸಾಂಪ್ರದಾಯಿಕ ವೈಭವದೊಂದಿಗೆ ಮುಂದುವರಿಯುವ ಉಡುಪಿ ಕೃಷ್ಣೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.











