ಬ್ರಹ್ಮಾವರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹1.50 ಲಕ್ಷ ಹಣ ಪಡೆದು ವಂಚಿಸಿರುವ ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನೇಶ್ ಅವರು ವಿದೇಶದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಫೇಸ್‌ಬುಕ್‌ನಲ್ಲಿದ್ದ ವೆಬ್‌ಸೈಟ್ ಮೂಲಕ ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 20ರಂದು ಆರೋಪಿಗಳು ಚೆನ್ನೈನಿಂದ ವಿಷ್ಣುಮಣಿ ಹಾಗೂ ಶ್ರೀನಿವಾಸನ್ ಎಂಬ ಹೆಸರಿನಲ್ಲಿ ಕರೆ ಮಾಡಿ, ವೀಸಾ ಕೊಡಿಸುವುದಾಗಿ ನಂಬಿಸಿ ₹1.50 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ದರು.
ಆರೋಪಿಗಳ ಮಾತನ್ನು ನಂಬಿದ ದಿನೇಶ್ ಅವರು ಜುಲೈ 2ರಂದು ಮಗಳ ಖಾತೆಯಿಂದ ಆರೋಪಿಗಳು ನೀಡಿದ್ದ ವೃಷ್ಣಕುಪ್ಪ ಆರ್ಥಿ ಹೆಸರಿನ ಬ್ಯಾಂಕ್ ಖಾತೆಗೆ ₹75,000 ಗೂಗಲ್ ಪೇ ಮೂಲಕ ಹಾಗೂ ಅಳಿಯನ ಖಾತೆಯಿಂದ ಅಜಿತ್ ಕುಮಾರ್ ಹೆಸರಿನ ಬ್ಯಾಂಕ್ ಖಾತೆಗೆ ₹75,000 ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಹಣ ಪಡೆದ ಬಳಿಕ ಆರೋಪಿಗಳು ವೀಸಾ ಕೊಡಿಸದೆ ಸಂಪರ್ಕಕ್ಕೂ ಸಿಗದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






