ಕಾರ್ಕಳ : ಕಾರ್ಕಳ, 26 ಆಗಸ್ಟ್ 2026: ಕಾರ್ಕಳದ ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಸಹಯೋಗದೊಂದಿಗೆ “5 ವರ್ಷಗಳ ಯಶಸ್ವಿ ಡಯಾಲಿಸಿಸ್ ಆರೈಕೆ : ಅಪ್‌ಡೇಟ್ ಮತ್ತು ಥ್ಯಾಂಕ್ಸ್ ಗಿವಿಂಗ್ ” ಎಂಬ ವಿಶೇಷ ಕೃತಜ್ಞತಾ ಕಾರ್ಯಕ್ರಮದೊಂದಿಗೆ ಐದು ವರ್ಷಗಳ ಯಶಸ್ವಿ ಡಯಾಲಿಸಿಸ್ ಆರೈಕೆಯನ್ನು ಆಚರಿಸಿತು.
ಈ ಕಾರ್ಯಕ್ರಮವು ಡಯಾಲಿಸಿಸ್ ಘಟಕದ ಬೆಳವಣಿಗೆ, ಗುಣಮಟ್ಟದ ಆರೈಕೆ, ಕೈಗೆಟುಕುವ ಮತ್ತು ಸಹಾನುಭೂತಿಯ ಡಯಾಲಿಸಿಸ್ ಸೇವೆ ಯನ್ನು, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಡಯಾಲಿಸಿಸ್ ಸೇವೆಯನ್ನು ಒದಗಿಸುವ ಆಸ್ಪತ್ರೆಯ ನಿರಂತರ ಬದ್ಧತೆಯನ್ನು ಎತ್ತಿ ತೋರಿಸಿತು.
ಆಸ್ಪತ್ರೆಯ ಡಯಾಲಿಸಿಸ್ ಘಟಕವು ರೋಟರಿ ಕ್ಲಬ್ ಮಣಿಪಾಲದಿಂದ ಅಮೂಲ್ಯವಾದ ಬೆಂಬಲವನ್ನು ಪಡೆದಿದೆ, ಈ ಸಂಸ್ಥೆಯು ‘ರೋಟರಿ ಗ್ಲೋಬಲ್ ಗ್ರಾಂಟ್’ ಮೂಲಕ ಮೂರು ಡಯಾಲಿಸಿಸ್ ಯಂತ್ರಗಳನ್ನು ಪ್ರಾಯೋಜಿಸಿದೆ. ಇದರೊಂದಿಗೆ, ಕಾರ್ಕಳದ ‘ಜಮೀಯತುಲ್ ಫಲಾಹ್’ ಮತ್ತು ಹೆಬ್ರಿಯ ‘ಬೆಳಂಜೆ ಸಂಜೀವ ಹೆಗ್ಡೆ ಟ್ರಸ್ಟ್’ ಕೂಡ ಹೆಚ್ಚುವರಿ ಯಂತ್ರಗಳನ್ನು ದೇಣಿಗೆಯಾಗಿ ನೀಡಿವೆ. ಅಲ್ಲದೆ, ಅಜೇಕಾರ್ ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಹಾಗೂ ವಿವಿಧ ಕುಟುಂಬಗಳು ಮತ್ತು ಇತರ ಹಿತೈಷಿಗಳು ನೀಡಿದ ಬೆಂಬಲವನ್ನೂ ಆಸ್ಪತ್ರೆಯು ಕೃತಜ್ಞತೆಯಿಂದ ಸ್ಮರಿಸಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷರಾದ Rtn. ಡಾ. ಪ್ರದೀಪ್ ಎಸ್., ದೀರ್ಘಕಾಲೀನ ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ರೋಟರಿ ಗ್ಲೋಬಲ್ ಗ್ರಾಂಟ್ ಮೂಲಕ ಉತ್ತಮ ಮೂತ್ರಪಿಂಡ ಆರೈಕೆ ಮತ್ತು ಡಯಾಲಿಸಿಸ್ ಸೌಲಭ್ಯ ಒದಗಿಸುವಲ್ಲಿ ರೋಟರಿ ಕ್ಲಬ್‌ನ ಸಹಕಾರವನ್ನು ವಿವರಿಸಿದರು.
ಡಾ. ದರ್ಶನ್ ರಂಗಸ್ವಾಮಿ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ, ಇವರು ಡಯಾಲಿಸಿಸ್ ಚಿಕಿತ್ಸೆಯಲ್ಲಿ ಗುಣಮಟ್ಟ, ರೋಗಿಗಳ ಸುರಕ್ಷತೆ ಮತ್ತು ನಿರಂತರ ಆರೈಕೆಯ ಮಹತ್ವವನ್ನು ತಿಳಿಸಿದರು. ಡಯಾಲಿಸಿಸ್ ಸೇವೆಗೆ ಸಹಕರಿಸಿದ ಆಸ್ಪತ್ರೆಯ ತಂಡ ಹಾಗೂ ದಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಕೆ. ಆರ್, ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ರೋಗಿಗಳಿಗೆ ದೂರದ ಪ್ರಯಾಣ ಮಾಡದೇ ಸುರಕ್ಷಿತ ಮತ್ತು ನಿರಂತರ ಡಯಾಲಿಸಿಸ್ ಸೇವೆ ನೀಡಲು ಆಸ್ಪತ್ರೆ ಬದ್ಧವಾಗಿದೆ ಎಂದು ಹೇಳಿದರು.
ಇದರೊಂದಿಗೆ ಹಲವಾರು ರೋಗಿಗಳಿಗೆ ವಿವಿಧ ದಾನಿಗಳ ಸಹಕಾರದಿಂದ ಡಯಾಲಿಸಿಸ್ ಸೌಲಭ್ಯವು ರಿಯಾಯಿತಿ ದರದಲ್ಲಿ ಒದಗಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಕಳೆದ ಐದು ವರ್ಷಗಳಲ್ಲಿ ಡಯಾಲಿಸಿಸ್ ಸೇವೆಯನ್ನು ಬಲಪಡಿಸಲು ಸಹಕರಿಸಿದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂಧಿವರ್ಗ, ದಾನಿಗಳು, ಸಂಸ್ಥೆಗಳು, ಕುಟುಂಬಗಳು ಮತ್ತು ಹಿತೈಷಿಗಳ ಕೊಡುಗೆಯನ್ನು ಸ್ಮರಿಸಲಾಯಿತು.






