ಉಡುಪಿ: ಉಡುಪಿ–ಕುಂದಾಪುರ–ಸಾಗರ ಮಾರ್ಗದಲ್ಲಿ ಸಂಚರಿಸುವ ಖಾಸಗಿ ದುರ್ಗಾಂಬ ಬಸ್‌ವೊಂದು ಇಂದು ಮುಂಜಾನೆ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿನಿಟಿ ಕಾಂಪ್ಲೆಕ್ಸ್ ಬಳಿಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟುಹೋಗಿದೆ.
ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬಸ್‌ನಲ್ಲಿನ ತಾಂತ್ರಿಕ ದೋಷವೇ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸದಿರುವುದರಿಂದ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬಸ್ ಮಾಲಕರು ಹಾಗೂ ಚಾಲಕರು ಬಸ್‌ಗಳನ್ನು ಪ್ರತಿದಿನ ಸಂಚಾರಕ್ಕೆ ಮುನ್ನ ಸೂಕ್ತವಾಗಿ ಪರಿಶೀಲಿಸಿ, ಪ್ರಯಾಣಿಕರ ಸುರಕ್ಷತೆಗೆ ಯೋಗ್ಯವಾಗಿದ್ದರೆ ಮಾತ್ರ ರಸ್ತೆಗಿಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಆಗ್ರಹಿಸಿದ್ದಾರೆ.
ಅಲ್ಲದೆ, ಉಡುಪಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ (RTO) ಹಾಗೂ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸಾರಿಗೆ ಬಸ್‌ಗಳ ಫಿಟ್ನೆಸ್ ಸರ್ಟಿಫಿಕೇಟ್ ಸೇರಿದಂತೆ ತಾಂತ್ರಿಕ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಯಾಣಿಕರ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗದಂತೆ ಬಸ್‌ಗಳ ನಿಯಮಿತ ತಪಾಸಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.







