ಉಡುಪಿ : ಕೇವಲ 13 ವರ್ಷದ ಬಾಲಕನಿದ್ದಾಗಲೇ ಕಾರ್ಕಳ ಮೂಲದ ಜೋಡುಕಟ್ಟೆಯ ಬಳಿ ಮಿಯ್ಯಾರು ಎಂಬ ಪುಟ್ಟ ಗ್ರಾಮದಿಂದ ದಿಕ್ಕುದೆಸೆಯಿಲ್ಲದೆ ಹೊರಟುನಿಂತ ಅಂದಿನ ಹುಡುಗ ಜಯರಾಮ ಬನಾನ ದೇಶವಿಡೀ ಅಲೆಮಾರಿಯಂತೆ ತಿರುಗಿ ಸ್ವಯಂ ಶ್ರಮದಿಂದ ಕಟ್ಟಿದ ಹೋಟೆಲ್ ಉದ್ಯಮ ಜಗತ್ತನ್ನೇ ಬೆರಗುಗೊಳಿಸಿದೆ.
ಹೊಟೇಲ್ ಸ್ವಾಗತ, ಸಾಗರ ರತ್ನ, ಶ್ರೀರತ್ನ, ಓಷಿಯನ್ ಪರ್ಲ್ ಸಹಿತ ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಹೊಟೇಲ್ ಗಳು, 10,000ಕ್ಕೂ ಹೆಚ್ಚು ಸಿಬ್ಬಂದಿಗಳು. ಜಯರಾಮ ಬನಾನ ನಡೆದು ಬಂದ ದಾರಿ ಪಟ್ಟ ಶ್ರಮ, ಕಟ್ಟಿದ ಸಾವಿರಾರು ಕೋಟಿಯ ಹೋಟೆಲ್ ಉದ್ಯಮದ ಸಾಮ್ರಾಜ್ಯ ನಿಜಕ್ಕೂ ಕುತೂಹಲಕಾರಿ.
ಬಿಡುವಿನ ವೇಳೆ ದೆಹಲಿಯಲ್ಲಿರುವ ಸಾಗರ ರತ್ನ ಹೋಟೆಲ್ ನಲ್ಲಿ ನನ್ನ ಜಿಲ್ಲೆಯ ಹಿರಿಯ ಜಯರಾಮ ಬನಾನರನ್ನು ಭೇಟಿ ಮಾಡಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನೊಳಗೊಂಡ ಮಾಹಿತಿ ಪುಸ್ತಕವೊಂದನ್ನು ನೀಡಿದೆ. ಈ ಸಂದರ್ಭದಲ್ಲಿ ನನ್ನೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸತೀಶ್ ಕುಂಪಲ ಇದ್ದರು. ತುಂಬು ಪ್ರೀತಿಯಿಂದ ಪುಸ್ತಕ ಸ್ವೀಕರಿಸಿದ ಬನಾನ ಹೇಳಿದ್ದು, ‘ಭಾರತ ದೇಶಕ್ಕಾಗಿ ಮೋದಿಯನ್ನು ನಾನು ಮಾತ್ರವಲ್ಲ, ಸರ್ವರೂ ಬೆಂಬಲಿಸಬೇಕು. ಮೋದಿ ದೇಶಕ್ಕೆ ಬೆಳಕು’ ಎಂದು ಉದ್ಘರಿಸಿದ್ದರು.
ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಬದುಕಿನಲ್ಲಿ ಪರಿಶ್ರಮ ಪಟ್ಟರೆ ಯಾವ ಮಟ್ಟ ಮುಟ್ಟಬಹುದು ಎಂಬುದಕ್ಕೆ ಜಯರಾಮ ಬನಾನ ಸಮಾಜಕ್ಕೊಂದು ಸಾಕ್ಷಿ.
ಅವರೆದುರು ಕಿರಿಯನಾದ ನನ್ನನ್ನು ಮೆಟ್ಟಲಿಳಿದು ಬೀಳ್ಕೊಡಲು ಬಂದದ್ದು ನೋಡಿ ಬನಾನರ ಬಗ್ಗೆ ಗೌರವ ಹೆಚ್ಚಿತ್ತು. ಖುಷಿಯೆಂದರೆ, 74 ರ ಹರೆಯದ ಜಯರಾಮ ಬನಾನ 24ರ ಯುವಕರನ್ನು ಮೀರಿಸುವ ಚುರುಕಿನ ವ್ಯಕ್ತಿಯಾಗಿ ಕಂಡು ಬಂದರು.







