ಕುಂದಾಪುರ, ಜು. 9: ರಾಷ್ಟ್ರೀಯ ಹೆದ್ದಾರಿ 66ರ ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಭರತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿಯಂತೆ, ಮಧ್ಯಾಹ್ನ ಸುಮಾರು 1:15 ಗಂಟೆಗೆ, ತಮಿಳುನಾಡು ನೋಂದಣಿ ಲಾರಿಯನ್ನು ಚಾಲಕ ಬಾಲ ಮುರುಗನ್ ಉಡುಪಿ ಕಡೆಯಿಂದ ಬೈಂದೂರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದನು. ಈ ವೇಳೆ ರಸ್ತೆಯ ಬಲಭಾಗದಲ್ಲಿ ಸಾಗುತ್ತಿದ್ದ ವಾಹನವನ್ನು ಎಡಭಾಗದಿಂದ ಓವರ್‌ಟೇಕ್ ಮಾಡುವ ವೇಳೆ, ಅದೇ ದಿಕ್ಕಿನಲ್ಲಿ ರಸ್ತೆಯ ಎಡಭಾಗದಲ್ಲಿ ಸಾಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ಭರತ್ ಶೆಟ್ಟಿಯವರಿಗೆ ಎಡಗೈ, ಭುಜ, ಎದೆ, ಬಲಗೈ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಕಿವಿ ಹಾಗೂ ಮೂಗಿನಿಂದ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದರು.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮಧ್ಯಾಹ್ನ 1:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ
ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







