ಕಾರ್ಕಳ : ಉದ್ಯೋಗಾಕಾಂಕ್ಷಿಗಳು ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ ಉತ್ತಮ ಉದ್ಯೋಗದೊಂದಿಗೆ ಭವಿಷ್ಯ ಭದ್ರಪಡಿಸಿಕೊಳ್ಳಬೇಕೆಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಜು. 9ರಂದು ವಿಕಾಸ ಉದ್ಯೋಗ ಸೇತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜು. 9 ಎಬಿವಿಪಿ ಸಂಸ್ಥಾಪನಾ ದಿನ, ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದ ನಾನು ರಾಷ್ಟ್ರೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದೆ ಎಂದು ತಿಳಿಸಿದ ಅವರು ವಿಕಾಸ ಸೇವಾ ಸಂಸ್ಥೆಯು ಕಾರ್ಕಳ ಹೆಬ್ರಿ ತಾಲೂಕಿನ ಜನತೆಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಈ ಶಿಬಿರದಲ್ಲಿ ಉದ್ಯೋಗ ದೊರೆಯದಿದ್ದಲ್ಲಿ ನಿರಾಶೆ ಆಗುವುದು ಬೇಡ. ವಿಕಾಸ ಸೇವಾ ಕಚೇರಿ ಯುವ ಸಮುದಾಯಕ್ಕಾಗಿ ಮುಕ್ತವಾಗಿ ತೆರೆದಿದ್ದು ಉದ್ಯೋಗಕ್ಕೆ ಸಂಬಂಧಪಟ್ಟಂತೆ ನಮ್ಮ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಹಿರಿಯ ಉದ್ಯಮಿ, ಬಿಜೆಪಿ ಮುಖಂಡ ಬೋಳ ಪ್ರಭಾಕರ ಕಾಮತ್, ಉದ್ಯಮಿ ಗಣೇಶ್ ಕಾಮತ್, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಸ್ಪೆಟ್ರಂ ಕಂಪನಿ ದಿವಾಕರ್, ಫಾಕ್ಸ್ ಕಾಂ ಕಂಪನಿಯ ರಾಜೇಶ್ವರಿ ಉಪಸ್ಥಿತರಿದ್ದರು. ಶಿಬಿರದಲ್ಲಿ 1600 ಮಂದಿ ನೋಂದಣಿ ಮಾಡಿಕೊಂಡಿದ್ದು, 25 ಕಂಪೆನಿ ಭಾಗವಹಿಸಿದ್ದವು.
ಸುಮಾ ರವಿಕಾಂತ್ ಪ್ರಾರ್ಥಿಸಿದರು. ಪ್ರಸಾದ್ ಐಸಿರ ಸ್ವಾಗತಿಸಿದರು. ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.







