ಮಣಿಪಾಲ, 6 ಜುಲೈ 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನ ಅಂಗಸಂಸ್ಥೆಯಾದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಶಿವಮೊಗ್ಗದ 63 ವರ್ಷದ ವ್ಯಕ್ತಿಗೆ ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಆರೋಗ್ಯದತ್ತ ಮರಳುವಂತೆ ಮಾಡಿದ್ದಾರೆ. ರೋಗಿಯ ಎಡ ಮೂತ್ರಪಿಂಡದಲ್ಲಿ ಉಂಟಾಗಿದ್ದ ಕ್ಯಾನ್ಸರ್ ಗೆಡ್ಡೆಯು ದೇಹದ ಅತಿದೊಡ್ಡ ರಕ್ತನಾಳವಾದ ಕೆಳಮಟ್ಟದ ವೆನಾ ಕ್ಯಾವಾ (Inferior Vena Cava–IVC) ಮೂಲಕ ಹರಡಿ ಹೃದಯದ ಬಲ ಹೃತ್ಕರ್ಣ ದ ವರೆಗೆ ತಲುಪಿತ್ತು. ಇಂತಹ ಸ್ಥಿತಿಯು ಮೂತ್ರಪಿಂಡದ ಕ್ಯಾನ್ಸರ್‌ನ ಅತ್ಯಂತ ಸಂಕೀರ್ಣ ಹಾಗೂ ಅಪರೂಪದ ಹಂತಗಳಲ್ಲಿ ಒಂದಾಗಿದೆ.
ರೋಗಿಯು ಸುಮಾರು ಒಂದು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ತಪಾಸಣೆ ಮತ್ತು ಸ್ಕ್ಯಾನ್‌ಗಳಲ್ಲಿ ಅವರ ಎಡ ಮೂತ್ರಪಿಂಡದಲ್ಲಿ ದೊಡ್ಡ ಗಾತ್ರದ ಕ್ಯಾನ್ಸರ್ ಗೆಡ್ಡೆ ಇರುವುದನ್ನು ಪತ್ತೆಹಚ್ಚಲಾಯಿತು. ಜೊತೆಗೆ, ಆ ಗೆಡ್ಡೆಯು ಟ್ಯೂಮರ್ ಥ್ರಂಬಸ್ (Tumor Thrombus) ರೂಪದಲ್ಲಿ ಕೆಳಮಟ್ಟದ ವೆನಾ ಕ್ಯಾವಾ (ಹೃದಯಕ್ಕೆ ರಕ್ತವನ್ನು ಮರಳಿ ಸಾಗಿಸುವ ಪ್ರಮುಖ ರಕ್ತನಾಳ) ಮೂಲಕ ವಿಸ್ತರಿಸಿ, ಹೃದಯದ ಬಲ ಹೃತ್ಕರ್ಣ ದ ವರೆಗೆ ತಲುಪಿರುವುದು ದೃಢಪಟ್ಟಿತು. ಮೂತ್ರಪಿಂಡದ ಕ್ಯಾನ್ಸರ್‌ನಲ್ಲಿ ಇಂತಹ ಹರಡುವಿಕೆಯು ಅತ್ಯಂತ ಮುಂದುವರಿದ ಹಾಗೂ ಚಿಕಿತ್ಸೆಗೆ ಸವಾಲಿನ ಹಂತವೆಂದು ಪರಿಗಣಿಸಲಾಗುತ್ತದೆ ಮತ್ತು ಚಿಕಿತ್ಸೆ ನೀಡದಿದ್ದರೆ, ಜೀವಕ್ಕೆ ಅಪಾಯಕಾರಿಯಾಗುತಿತ್ತು.
ರೋಗಿಯನ್ನು ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಘಟಕದ ಮುಖ್ಯಸ್ಥರಾದ ಡಾ. ಅರುಣ್ ಚಾವ್ಲಾ ಅವರ ನೇತೃತ್ವದಲ್ಲಿ ದಾಖಲಿಸಿಕೊಳ್ಳಲಾಯಿತು. ಅವರ ನೇತೃತ್ವದ ಮೂತ್ರಶಾಸ್ತ್ರ ತಂಡವು, ಹೃದಯ, ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸೆ (CTVS) ವಿಭಾಗದ ತಜ್ಞರೊಂದಿಗೆ ಸಮನ್ವಯ ಸಾಧಿಸಿ ಶಸ್ತ್ರಚಿಕಿತ್ಸೆಯ ಸಮಗ್ರ ಯೋಜನೆಯನ್ನು ರೂಪಿಸಿತು. ರೋಗಿಯು ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ ಹಾಗೂ ಸೌಮ್ಯ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ, ಹೃದಯಶಾಸ್ತ್ರ ಮತ್ತು ಎಂಡೋಕ್ರಿನೊಲೊಜಿ ವಿಭಾಗಗಳ ತಜ್ಞರು ಮೊದಲು ಅವರ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿ, ಶಸ್ತ್ರಚಿಕಿತ್ಸೆಗೆ ಸೂಕ್ತವಾಗುವಂತೆ ಚಿಕಿತ್ಸೆ ನೀಡಿದರು.
2026ರ ಜೂನ್ 17ರಂದು, ಮೂತ್ರಶಾಸ್ತ್ರ ಹಾಗೂ CTVS ವಿಭಾಗಗಳ ತಜ್ಞರ ತಂಡಗಳು ಒಂದೇ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದವು. ಶಸ್ತ್ರಚಿಕಿತ್ಸೆಯ ಮೊದಲ ಹಂತದಲ್ಲಿ ಮೂತ್ರಶಾಸ್ತ್ರ ತಂಡವು ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿ , ಕ್ಯಾನ್ಸರ್ ಪೀಡಿತ ಮೂತ್ರಪಿಂಡವನ್ನು ತೆರವುಗೊಳಿಸಿ, ಪ್ರಮುಖ ರಕ್ತನಾಳದೊಳಗೆ ವಿಸ್ತರಿಸಿದ್ದ ಗೆಡ್ಡೆಯನ್ನು ಎಚ್ಚರಿಕೆಯಿಂದ ಬೇರ್ಪಡಿಸುವ ಕಾರ್ಯವನ್ನು ಕೈಗೊಂಡಿತು. ಮುಂದಿನ ಹಂತದಲ್ಲಿ, CTVS ತಂಡವು ಎದೆಯ ಮೂಳೆಯನ್ನು ತೆರೆಯುವ ಮೂಲಕ ರೋಗಿಯನ್ನು ಹೃದಯ-ಶ್ವಾಸಕೋಶ ಯಂತ್ರಕ್ಕೆ (Heart-Lung Machine) ಸಂಪರ್ಕಿಸಿತು. ಈ ಯಂತ್ರವು ಶಸ್ತ್ರಚಿಕಿತ್ಸೆಯ ವೇಳೆ ತಾತ್ಕಾಲಿಕವಾಗಿ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯವನ್ನು ನಿರ್ವಹಿಸಿತು. ನಂತರ, ಮೆದುಳು ಸೇರಿದಂತೆ ಪ್ರಮುಖ ಅಂಗಗಳನ್ನು ರಕ್ಷಿಸುವ ಉದ್ದೇಶದಿಂದ ರೋಗಿಯ ದೇಹದ ಉಷ್ಣತೆಯನ್ನು ಕ್ರಮೇಣ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲಾಯಿತು.
ಈ ಪ್ರಕ್ರಿಯೆಯ ಬಳಿಕ, ಹೃದಯದ ಬಲ ಹೃತ್ಕರ್ಣ ಹಾಗೂ ಕೆಳಮಟ್ಟದ ವೆನಾ ಕ್ಯಾವಾ (Inferior Vena Cava–IVC)ಯಿಂದ ಗೆಡ್ಡೆಯನ್ನು ಸುರಕ್ಷಿತವಾಗಿ ತೆರವುಗೊಳಿಸಲು ರಕ್ತದ ಪರಿಚಲನೆಯನ್ನು ಕೆಲಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ವೈದ್ಯಕೀಯವಾಗಿ ಸಂಪೂರ್ಣ ರಕ್ತಪರಿಚಲನಾ ಸ್ತಂಭನ (Total Circulatory Arrest) ಎಂದು ಕರೆಯಲ್ಪಡುವ ಈ ಅತ್ಯಂತ ಸೂಕ್ಷ್ಮ ತಂತ್ರದ ನೆರವಿನಿಂದ, ತಜ್ಞರು ಗೆಡ್ಡೆಯನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ಹೊರತೆಗೆದರು. ರಕ್ತ ಪರಿಚಲನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬಳಿಕ, ಶಸ್ತ್ರಚಿಕಿತ್ಸಕರಿಗೆ ಅತ್ಯಂತ ಮಹತ್ವದ ಹಾಗೂ ಸೀಮಿತ ಸಮಯ ಲಭ್ಯವಿತ್ತು. ಈ ವೇಳೆ ಹೃದಯದ ಬಲ ಹೃತ್ಕರ್ಣ ಮತ್ತು ಕೆಳಮಟ್ಟದ ವೆನಾ ಕ್ಯಾವಾ (Inferior Vena Cava–IVC)ಯನ್ನು ಏಕಕಾಲದಲ್ಲಿ ತೆರೆದು, ಮೂತ್ರಶಾಸ್ತ್ರ ಹಾಗೂ CTVS ತಂಡಗಳು ಅತ್ಯಂತ ನಿಖರವಾದ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದವು. ಈ ಜಂಟಿ ಪ್ರಯತ್ನದ ಫಲವಾಗಿ, ರಕ್ತಪ್ರವಾಹಕ್ಕೆ ಯಾವುದೇ ಅಪಾಯ ಉಂಟಾಗದಂತೆ ಸಂಪೂರ್ಣ ಗೆಡ್ಡೆಯನ್ನು ಒಂದೇ ತುಂಡಿನಲ್ಲಿ ಯಶಸ್ವಿಯಾಗಿ ತೆರವುಗೊಳಿಸಲಾಯಿತು. ಬಳಿಕ, ರಕ್ತನಾಳದೊಳಗೆ ತೆಳುವಾದ ಕ್ಯಾಮೆರಾವನ್ನು ಬಳಸಿ ಯಾವುದೇ ಗೆಡ್ಡೆಯ ಭಾಗ ಉಳಿದಿಲ್ಲ ಎಂಬುದನ್ನು ದೃಢಪಡಿಸಲಾಯಿತು.
ಗೆಡ್ಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿದ ನಂತರ, ಹೃದಯದ ಬಲ ಹೃತ್ಕರ್ಣವನ್ನು ಮುಚ್ಚಿ, ಕೆಳಮಟ್ಟದ ವೆನಾ ಕ್ಯಾವಾ (IVC)ಯನ್ನು ಮರುಜೋಡಣೆ ಮಾಡಲಾಯಿತು. ನಂತರ ರಕ್ತ ಪರಿಚಲನೆಯನ್ನು ಪುನರಾರಂಭಿಸಿ, ರೋಗಿಯ ದೇಹದ ಉಷ್ಣತೆಯನ್ನು ಕ್ರಮೇಣ ಸಾಮಾನ್ಯ ಮಟ್ಟಕ್ಕೆ ತರಲಾಯಿತು. ರೋಗಿಯ ಹೃದಯವು ಸಹಜವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ, ಅವರನ್ನು ಹೃದಯ-ಶ್ವಾಸಕೋಶ ಯಂತ್ರದಿಂದ ಸುರಕ್ಷಿತವಾಗಿ ಬೇರ್ಪಡಿಸಲಾಯಿತು. ಅಂತಿಮ ಹಂತದಲ್ಲಿ, ಮೂತ್ರಶಾಸ್ತ್ರ ತಂಡವು ಉಳಿದ ರಕ್ತನಾಳಗಳನ್ನು ಸುರಕ್ಷಿತವಾಗಿ ನಿರ್ವಹಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ರೋಗಿಯ ಸಂಪೂರ್ಣ ರಕ್ತ ಪರಿಚಲನೆಯನ್ನು ನಿಲ್ಲಿಸಿ ಗೆಡ್ಡೆಯನ್ನು ತೆಗೆದುಹಾಕುವುದು ಅತ್ಯಂತ ಅಪರೂಪದ ವಿಧಾನವಾಗಿದ್ದು, ಇದಕ್ಕೆ ಹೃದಯ ಶಸ್ತ್ರಚಿಕಿತ್ಸಾ ಮತ್ತು ಪರ್ಫ್ಯೂಷನ್ ತಂಡಗಳಿಂದ ಉನ್ನತ ಮಟ್ಟದ ಪರಿಣತಿ ಬೇಕಾಗುತ್ತದೆ. ಈ ಹಂತದಲ್ಲಿ ಒಂದು ಸಣ್ಣ ದೋಷವೂ ಸಹ ಮೆದುಳು ಅಥವಾ ಇತರ ಅಂಗಗಳಿಗೆ ಶಾಶ್ವತ ಹಾನಿಯನ್ನುಂಟುಮಾಡಬಹುದು. ನರವೈಜ್ಞಾನಿಕ ತೊಡಕುಗಳಿಲ್ಲದೆ ರೋಗಿಯ ಚೇತರಿಕೆಯು ಪರಿಣಿತ ಶಸ್ತ್ರಚಿಕಿತ್ಸಾ ತಂಡಗಳ ಶಕ್ತಿ ಮತ್ತು ಪರಿಣತಿಗೆ ಪ್ರಬಲ ಸಾಕ್ಷಿಯಾಗಿದೆ.
ಸುಮಾರು 12 ಗಂಟೆಗಳ ಕಾಲ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯ ಬಳಿಕ, ರೋಗಿಯನ್ನು ಚೇತರಿಕೆಗೆ ನೆರವಾಗುವ ಉದ್ದೇಶದಿಂದ ತೀವ್ರ ನಿಗಾ ಘಟಕದಲ್ಲಿ (ICU) ಸುಮಾರು 12 ಗಂಟೆಗಳ ಕಾಲ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಯಿತು. ನಂತರ ಅವರನ್ನು ಯಶಸ್ವಿಯಾಗಿ ವೆಂಟಿಲೇಟರ್‌ನಿಂದ ಹೊರತೆಗೆದು, ಅವರು ಸ್ವಯಂ ಉಸಿರಾಟವನ್ನು ಆರಂಭಿಸಿದರು. ಐಸಿಯುನಲ್ಲಿ ಅವರ ಚೇತರಿಕೆ ತೃಪ್ತಿಕರವಾಗಿದ್ದು, ಮೂರು ದಿನದಲ್ಲಿ ಅವರು ನಡೆಯಡುವಷ್ಟು ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆಯ ಸುಮಾರು ಎರಡು ವಾರಗಳ ಬಳಿಕ ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಅವರು ತಮ್ಮ ಸ್ವಗ್ರಾಮ ಶಿವಮೊಗ್ಗಕ್ಕೆ ಮರಳಿದ್ದು, ವೈದ್ಯರ ಸಲಹೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಹೃದಯ ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸೆ (CTVS) ವಿಭಾಗದ ಹಿರಿಯ ತಜ್ಞರಾದ ಡಾ. ಶ್ಯಾಮ್ ಕೆ. ಅಶೋಕ್ ಹಾಗೂ ಡಾ. ಗಣೇಶ್ ಕಾಮತ್ , ಮೂತ್ರಶಾಸ್ತ್ರ ವಿಭಾಗದ ಹಿರಿಯ ತಜ್ಞ ಡಾ. ಅರುಣ್ ಚಾವ್ಲಾ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ. ವಿ. ಶ್ರೀನಾಥ್ ಶಸ್ತ್ರಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅರಿವಳಿಕೆ ತಜ್ಞರಾದ ಡಾ. ವಿಜಯ್ ಕುಮಾರ್ ಮತ್ತು ಡಾ. ಸಾಯಿ ಕೃಷ್ಣ, ಪರ್ಫ್ಯೂಷನ್ ತಂಡ , ತೀವ್ರ ನಿಗಾ (Critical Care) ಮತ್ತು ಅಂತಃಸ್ರಾವಶಾಸ್ತ್ರ ವಿಭಾಗಗಳ ತಜ್ಞರ ಸಮನ್ವಯ ಮತ್ತು ಬೆಂಬಲದೊಂದಿಗೆ ಈ ಬಹುಶಾಖಾ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
“ಮೂತ್ರಪಿಂಡದ ಕ್ಯಾನ್ಸರ್ ಗೆಡ್ಡೆಯು ಹೃದಯದವರೆಗೆ ವಿಸ್ತರಿಸಿದಾಗ, ಅದರ ಚಿಕಿತ್ಸೆಗೆ ವಿವಿಧ ತಜ್ಞರ ಸಮನ್ವಯದೊಂದಿಗೆ ಅತ್ಯಂತ ನಿಖರವಾದ ಯೋಜನೆ ಮತ್ತು ಪರಿಣತಿ ಅಗತ್ಯವಾಗುತ್ತದೆ. ಈ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ನಮ್ಮ ಅನುಭವಿ ವೈದ್ಯರ ತಂಡ, ವಿವಿಧ ವಿಭಾಗಗಳ ನಡುವಿನ ಅತ್ಯುತ್ತಮ ಸಮನ್ವಯ ಹಾಗೂ ಇಂತಹ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ನಮ್ಮ ಆಸ್ಪತ್ರೆಯಲ್ಲಿರುವ ಸುಧಾರಿತ ಸೌಲಭ್ಯಗಳು ಪ್ರಮುಖ ಕಾರಣವಾಗಿವೆ. ರೋಗಿಯು ಯಶಸ್ವಿಯಾಗಿ ಚೇತರಿಸಿಕೊಂಡು ಆರೋಗ್ಯವಂತನಾಗಿ ಮನೆಗೆ ಮರಳಿರುವುದು ವೈದ್ಯಕೀಯ ತಂಡಕ್ಕೆ ಅತ್ಯಂತ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ,” ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಘಟಕದ ಮುಖ್ಯಸ್ಥರಾದ ಡಾ. ಅರುಣ್ ಚಾವ್ಲಾ ಹೇಳಿದರು.
“ಆರಂಭದಿಂದಲೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯನ್ನು ಅತ್ಯಂತ ಸಂಕೀರ್ಣ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಇಂತಹ ಹೆಚ್ಚಿನ ಅಪಾಯದ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲು ನಮ್ಮ ಪರಿಣತ ವೈದ್ಯರ ತಂಡ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳು ಮತ್ತು ಸುಸಜ್ಜಿತ ತೀವ್ರ ನಿಗಾ ವ್ಯವಸ್ಥೆಯೇ ಪ್ರಮುಖ ಶಕ್ತಿಯಾಗಿದೆ. ಪ್ರತಿಯೊಬ್ಬ ರೋಗಿಗೂ ಸುರಕ್ಷಿತ, ಗುಣಮಟ್ಟದ, ವಿಶ್ವಮಟ್ಟದ ಹಾಗೂ ಮಾನವೀಯ ಸ್ಪರ್ಶವುಳ್ಳ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಪ್ರಮುಖ ಬದ್ಧತೆಯಾಗಿದೆ,” ಎಂದು ಮಾಹೆ, ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಡಾ. ಸುಧಾಕರ್ ಕಂಟಿಪುಡಿ ಹೇಳಿದರು.







