ಉಡುಪಿ :ಮಣಿಪಾಲದ ಮಾಧವ ಕೃಪಾ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಂಶೆಲ್ ಶರುನ್ ತನ್ನ ಶಾಲಾ ಬಸ್ಸಿನ ಚಾಲಕರು ಚಾಲನೆಯ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೀಡಾಗಿ ಬಸ್ ನಿಯಂತ್ರಣ ತಪ್ಪಿದಾಗ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಭಾರೀ ಅವಘಡವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದರು.
ಶಾಲಾ ಬಸ್ಸಿನಲ್ಲಿದ್ದ 40 ವಿದ್ಯಾರ್ಥಿಗಳನ್ನು ಅಪಾಯದಿಂದ ರಕ್ಷಿಸಿದ ವಿದ್ಯಾರ್ಥಿ ಅಂಶೆಲ್ ಶರುನ್ ರವರನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಶಾಲೆಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀ ರುಡಾಲ್ಫ್ ಡಿಸೋಜಾ, ನಗರ ಬಿಜೆಪಿ ಯುವಮೋರ್ಚದ ಅಧ್ಯಕ್ಷರಾದ ಶ್ರೀವತ್ಸ, ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಶ್ರೀ ಡೆನಿಸ್ ಮಸ್ಕರೇನ್ಹಸ್, ಯುವ ಮೋರ್ಚಾದ ಪದಾಧಿಕಾರಿಗಳಾದ ಶ್ರೀ ನಿತಿನ್ ಪೈ, ಶ್ರೀ ಧನುಷ್ ಬಿ. ಕೆ. , ಶ್ರೀ ಭೂಷಣ್ ಕುಮಾರ್, ಶಾಲೆಯ ವ್ಯವಸ್ಥಾಪಕರಾದ ಶ್ರೀ ರಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.







