ಬೆಳ್ತಂಗಡಿ, ಮಾ. 11: ಮುಂಡಾಜೆ ಗ್ರಾಮದ ಕಾಪು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಈ ಅಪಘಾತದಲ್ಲಿ ತಿಪಟೂರು ಮೂಲದ ಶ್ರೀನಿವಾಸ (53) ಹಾಗೂ ಷಣ್ಮುಖ (46) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಜೀವಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ತಿಪಟೂರಿನಿಂದ ಉಜಿರೆ ಕಡೆಗೆ ಕಾರು ಸಂಚರಿಸುತ್ತಿದ್ದ ವೇಳೆ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಮುಂಡಾಜೆ ಗ್ರಾಮದ ಕಾಪು ಪ್ರದೇಶ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿಗೆ ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣವಾಗಿ ತುಂಡಾಗಿ ಬಿದ್ದಿದ್ದು, ಕಕ್ಕಿಂಜೆ ವಿದ್ಯುತ್ ಉಪಕೇಂದ್ರದ ಮುಂಡಾಜೆ ಹಾಗೂ ದಿಡುಪೆ ಫೀಡರ್ ವ್ಯಾಪ್ತಿಯಲ್ಲಿ ಮಧ್ಯಾಹ್ನದವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಯಿತು. ಪಲ್ಟಿಯಾದ ಕಾರಿನ ಮುಂಭಾಗ ಬಹುತೇಕ ಹಾನಿಗೊಂಡಿದೆ.







