ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವು ಕಾರ್ಕಳ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾರ್ಕಳ ಬಂಗ್ಲೆಗುಡ್ಡೆಯ ತೈಬಾ ಗಾರ್ಡನ್ ಪ್ರಾಂಶುಪಾಲರಾದ ಮೌಲಾನ ಅಹ್ಮದ್ ಶರೀಪ್ ಮಾತನಾಡಿ, ಜಗತ್ತು ನೆನಪಿಟ್ಟುಕೊಳ್ಳುವ ಅನೇಕ ಅತ್ಯಾಧುನಿಕ ಅವಿಷ್ಕಾರಗಳನ್ನು ಕಂಡುಹಿಡಿದವರು ತಮ್ಮ ಜೀವನದ ಅಂತ್ಯದ ವೇಳೆಯಲ್ಲಿ ಮನಶಾಂತಿಗಾಗಿ ಧರ್ಮದ ಪಾಲನೆಗೆ ಮೊರೆ ಹೋಗಿರುವುದನ್ನು ನಾವು ನೋಡಿದ್ದೇವೆ. ನಾವೆಲ್ಲರೂ ನಮ್ಮ ಧರ್ಮಗಳನ್ನು ಪಾಲಿಸುತ್ತಾ ಶಾಂತಿ ಹಾಗೂ ಸೌಹಾರ್ದತೆಗೆ ಮಹತ್ವ ನೀಡೋಣ ಎಂದು ಹೇಳಿದರು.
ನಕ್ರೆ ಚರ್ಚ್ ಧರ್ಮಗುರುಗಳಾದ ವಂದನೀಯ ಪಾದರ್ ಲೂಯಿಸ್ ಡೇಸಾ ಮಾತನಾಡಿ, ನಾವೆಲ್ಲರೂ ದೇವರ ಮಕ್ಕಳು. ಜಾತಿ ಮತ್ತು ಧರ್ಮದ ಭೇದಭಾವವು ನಮ್ಮನ್ನು ವಿಭಜಿಸದಂತೆ ಎಲ್ಲರೂ ಜಾಗೃತರಾಗಿರಬೇಕು ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡರಾದ ಶೇಖರ ಮಡಿವಾಳ ಮಾತನಾಡಿ, ಜಾಗತಿಕವಾಗಿ ಯುದ್ಧದ ಕಾರ್ಮೋಡ ಕವಿದಿರುವ ಈ ಸಮಯದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಹಾರೈಸಿದರು. ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾನತೆಯನ್ನು ಸಾರಿದ ಸಂತ ಶಿಶುನಾಳ ಶರೀಫರ ಜಯಂತಿಯ ಪುಣ್ಯದಿನದಂದು ವಿವಿಧ ಮತಧರ್ಮಗಳ ಜನರು ಒಂದಾಗಿ ಸೇರಿರುವುದು ಸಂತಸದ ವಿಷಯ. ಉಪವಾಸದ ತಿಂಗಳು ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದು ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಅಧ್ಯಕ್ಷೀಯ ಮಾತುಗಳನ್ನಾಡಿ, ಸರ್ವಧರ್ಮಗಳ ಜನರನ್ನು ಒಗ್ಗೂಡಿಸಿ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ಇಫ್ತಾರ್ ಕೂಟ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷರಾದ ಎಂ.ಎ. ಗಫೂರ್ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖ್ ವಾಹಿದ್ ದಾವೂದ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಶುಭಾನ್ ಮತ್ತು ಅಕ್ಬರ್ ಅವರ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕದ ಅಧ್ಯಕ್ಷ ಮೊಹ್ಮದ್ ಗೌಸ್, ಆಶ್ಫಕ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎಂ.ಪಿ. ಮೊಯಿದಿನಬ್ಬ ಇನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶೇಖ್ ಶಭೀರ್ ಮಿಯ್ಯಾರು ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಸಾಣೂರು ಧನ್ಯವಾದ ಅರ್ಪಿಸಿದರು.
ಅರುಣ್ ಭಟ್ ಕಾರ್ಕಳ







