ಉಡುಪಿ, ಮಾ. 07: ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಬಾರಿ “ಸ್ವಯಂ-ಗಣತಿ” ಆಯ್ಕೆಯೂ ಜನರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ 2027ರ ಜನಗಣತಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ಹಂತವಾಗಿ ಏಪ್ರಿಲ್ 16ರಿಂದ 30 ದಿನಗಳ ಕಾಲ ಮನೆ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯಲಿದೆ. ನಂತರದ ಹಂತವಾಗಿ 2027ರ ಫೆಬ್ರವರಿಯಿಂದ ಜನಸಂಖ್ಯೆ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಸರ್ಕಾರದ ಮಾರ್ಗಸೂಚಿಗಳಂತೆ ಗಣತಿ ಕಾರ್ಯಕ್ಕೆ ಅಗತ್ಯವಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಮನೆಗಳ ಪಟ್ಟಿ ಸಿದ್ಧಪಡಿಸುವುದು, ದತ್ತಾಂಶ ಸಂಗ್ರಹಣೆ, ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ಮೊಬೈಲ್ ಅಪ್ಲಿಕೇಶನ್ ಹಾಗೂ ಕೇಂದ್ರ ಪೋರ್ಟಲ್ ಬಳಕೆ ಮಾಡಲಾಗುತ್ತದೆ. ಮನೆಗಣತಿ ಕಾರ್ಯಕ್ಕೆ ಬೇಕಾದ ಸಿಬ್ಬಂದಿ ನೇಮಕಾತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ತರಬೇತುದಾರರ ಅಂತಿಮಗೊಳಿಸುವಿಕೆ, ಜಿಲ್ಲಾ ಜನಗಣತಿ ಅಧಿಕಾರಿಗಳಿಗೆ ತರಬೇತಿ, ಕ್ಷೇತ್ರ ಮಟ್ಟದ ಕಾರ್ಯಕರ್ತರ ನೇಮಕಾತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿದರು. ಜಿಪಿಎಸ್ ಆಧಾರಿತ ಮ್ಯಾಪಿಂಗ್ ಕಾರ್ಯವನ್ನು ಕೂಡ ಪೂರ್ಣಗೊಳಿಸಬೇಕಿದ್ದು, ಎಲ್ಲ ಕ್ರಮಗಳನ್ನು ನಿಗದಿತ ಅವಧಿಯೊಳಗೆ ಕೈಗೊಳ್ಳುವಂತೆ ಹೇಳಿದರು. ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವುದು ಅಗತ್ಯ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿ.ಪಂ. ಯೋಜನಾ ನಿರ್ದೇಶಕ ಉದಯ ಕುಮಾರ್ ಶೆಟ್ಟಿ, ಸಹಾಯಕ ಆಯುಕ್ತೆ ರಶ್ಮಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಎಚ್.ಪಿ.ವಿ. ಲಸಿಕೆ ಕುರಿತು ಜಾಗೃತಿ ಅಗತ್ಯ
ಮಣಿಪಾಲ: ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ 14 ವರ್ಷ ಪೂರ್ಣಗೊಂಡ ಬಾಲಕಿಯರಿಗೆ ರಾಷ್ಟ್ರೀಯ ಎಚ್.ಪಿ.ವಿ. ಲಸಿಕೆ ಅಭಿಯಾನದಡಿ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಚ್.ಪಿ.ವಿ. ಲಸಿಕೆ ಕಾರ್ಯಕ್ರಮದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 11,274 ಬಾಲಕಿಯರಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. ಅಭಿಯಾನದಡಿ ಒಂದು ಡೋಸ್ ಲಸಿಕೆ ನೀಡಲಾಗುತ್ತದೆ. ಇದು ಸ್ವಯಂಪ್ರೇರಿತ ಕಾರ್ಯಕ್ರಮವಾಗಿದ್ದು, ಪೋಷಕರು ಅಥವಾ ಪಾಲಕರ ಅನುಮತಿ ಕಡ್ಡಾಯ ಎಂದು ಹೇಳಿದರು.







