ಉಡುಪಿ, ಫೆ. 24:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನರಾಜ್ (58) ಎಂಬ ವ್ಯಕ್ತಿ ನಕಲಿ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕಿದ್ದಾನೆ.
ಸನ್ಯಾಸಿಯ ವೇಷ ಧರಿಸಿ ಸಂಚರಿಸುತ್ತಿದ್ದ ಆತನ ಬಗ್ಗೆ ಸ್ಥಳೀಯರು ನಾಗರಿಕ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಮಾಹಿತಿ ಆಧರಿಸಿ ಕ್ರಮಕ್ಕೆ ಮುಂದಾದ ವೇಳೆ, ಆತ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಇದನ್ನು ಗಮನಿಸಿದ ನಗರ ಠಾಣೆ ಪೊಲೀಸರು ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಆತನನ್ನು ವಶಕ್ಕೆ ಪಡೆದು ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಶಿರೂರು ಅವರು ಸಹಕಾರ ನೀಡಿದರು. ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.







