ಮಂಗಳೂರು, ಫೆ. 20: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಹಾಲು ಪೂರೈಕೆ ಮಾಡುವ ಸದಸ್ಯ ರೈತರಿಗೆ ಲೀಟರ್ ಹಾಲಿಗೆ ₹1 ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಒಕ್ಕೂಟ ತೀರ್ಮಾನಿಸಿದೆ.
ಈ ಹೆಚ್ಚುವರಿ ಧನ ಫೆಬ್ರವರಿ 21ರಿಂದ ಮೇ 31ರವರೆಗೆ ಅನ್ವಯವಾಗಲಿದೆ. ಈ ಕ್ರಮದಿಂದ ಪ್ರತಿದಿನ ಸುಮಾರು ₹4.1 ಲಕ್ಷ ಹೆಚ್ಚುವರಿ ವೆಚ್ಚವಾಗಲಿದ್ದು, ಮೂರು ತಿಂಗಳ ಅವಧಿಯಲ್ಲಿ ಒಟ್ಟು ಸುಮಾರು ₹4 ಕೋಟಿ ವಿಶೇಷ ಪ್ರೋತ್ಸಾಹಧನವನ್ನು ರೈತರಿಗೆ ಪಾವತಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಗುಣಮಟ್ಟದ ಹಾಲಿಗೆ ಲೀಟರ್‌ಗೆ ₹1.50 ಪ್ರೋತ್ಸಾಹಧನ ಸೇರಿ ₹40.76 ನೀಡಲಾಗುತ್ತಿದ್ದು, ಇದೀಗ ಹೆಚ್ಚುವರಿ ₹1 ಸೇರಿಸಿ ಪರಿಷ್ಕೃತ ದರವನ್ನು ₹41.76ಕ್ಕೆ ಏರಿಸಲಾಗಿದೆ.
ಹಸಿರು ಮತ್ತು ಒಣಮೇವುಗಳ ಕೊರತೆಯಿಂದ ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವಾಗುವ ಉದ್ದೇಶದಿಂದ ಈ ವಿಶೇಷ ಪ್ರೋತ್ಸಾಹಧನ ಘೋಷಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.







