ಕಟಪಾಡಿ, ಫೆ. 18: ಸ್ನೇಹಿತರೊಂದಿಗೆ ಪುಣ್ಯಕ್ಷೇತ್ರ ಸಂದರ್ಶನಕ್ಕೆ ತೆರಳಿದ್ದ ಕಾಪು ತಾಲೂಕು ಸರಕಾರಿಗುಡ್ಡೆ ಸುಭಾಸ್ ನಗರದ ಯುವಕ ಅಶೋಕ್ ಆಚಾರ್ಯ (33) ದಿಢೀರ್ ಆಗಿ ಅನಾರೋಗ್ಯ ಬಾಧಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸ್ಸಾಂನ ಗುವಾಹಟಿಯ ಸ್ವಾಗತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.15ರಂದು ಮೃತಪಟ್ಟ ಘಟನೆ ನಡೆದಿದೆ.
ಸಂತೆಕಟ್ಟೆ, ಬ್ರಹ್ಮಾವರ ಭಾಗಗದಲ್ಲಿ ಆಟೋ ಇಲೆಕ್ಟ್ರಿಷಿಯನ್ ವೃತ್ತಿ ನಿರತ ಅಶೋಕ್ ಆಚಾರ್ಯ ಉಡುಪಿ ಭಾಗದ 9 ಮಂದಿ ಸ್ನೇಹಿತರು ಜತೆಗೂಡಿಕೊಂಡು ಫೆ.6 ರಂದು ವಿಮಾನ ಯಾನದ ಮೂಲಕ ಅಸ್ಸಾಂ ಗುವಾಹಟಿಯ ನೀಲಾಚಲ್ ಹಿಲ್ ನಲ್ಲಿರುವ ಕಾಮಾಕ್ಯ ದೇವಾಲಯಕ್ಕೆ ಪುಣ್ಯಕ್ಷೇತ್ರ ಸಂದರ್ಶನದ ಪ್ರವಾಸ ಕೈಗೊಂಡಿದ್ದರು.
ಫೆ.7ರಂದು ಕಾಮಾಕ್ಯ ದೇವಿಯ ದರ್ಶನವನ್ನು ಸಾವಕಾಶವಾಗಿ ಪೂರೈಸಿಕೊಂಡು, ಸ್ಥಳೀಯವಾಗಿಯೇ ಇದ್ದು ಪರಿಸರದಲ್ಲಿ ತಮ್ಮ ಸ್ಮರಣೀಯ ಕ್ಷಣಗಳನ್ನು ಸ್ನೇಹಿತರೊಂದಿಗೆ ಕಳೆದಿರುತ್ತಾರೆ.
ಫೆ.8ರಂದು ಹುಟ್ಟೂರಿಗೆ ಹಿಂತಿರುಗಲು ವಿಮಾನ ಪ್ರಯಾಣಕ್ಕೆ ಸಿದ್ಧರಾಗಿದ್ದು, ಚಳಿ ಮತ್ತು ತಲೆ ಸುತ್ತು ಬಂದ ಕಾರಣ ಅನಾರೋಗ್ಯ ಬಾಧಿಸಿದ್ದು, ಸ್ನೇಹಿತರು ಕೂಡಲೇ ಈತನನ್ನು ಅಸ್ಸಾಂನ ಗುವಾಹಟಿಯ ಸ್ವಾಗತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಅದಾಗಲೇ ಗಂಭೀರ ಪರಿಸ್ಥಿತಿಯ ಬಗ್ಗೆ ಅರಿವಿಗೆ ಬಂದ ಕ್ಷಣದ ಬಳಿಕ ಮನೆ ಮಂದಿಗೆ ಮಾಹಿತಿಯನ್ನು ನೀಡಿದ್ದು, ಸಹೋದರ ರಾಜೇಶ್ ಆಚಾರ್ಯ ಫೆ.9ರಂದು ಆಸ್ಪತ್ರೆಗೆ ತಲುಪಿದ್ದರು.
ಗಂಭೀರ ಸ್ಥಿತಿಯಲ್ಲಿ ಇಂಟೆನ್ಸಿವ್ ಕೇರ್ ಯುನಿಟ್ ನಲ್ಲಿ ನಿರಂತರ 8 ದಿನಗಳ ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಅಶೋಕ್ ಆಚಾರ್ಯ ಫೆ.15ರಂದು ಮೃತಪಟ್ಟಿರುತ್ತಾರೆ.
ಬಳಿಕ ಕಾನೂನು ರೀತ್ಯಾ ಕ್ರಮಗಳನ್ನು ಪೂರೈಸಿಕೊಂಡು ಪಾರ್ಥಿವ ಶರೀರವನ್ನು ಬೆಂಗಳೂರು ವರೆಗೆ ವಿಮಾನದಲ್ಲಿ ಬಳಿಕ ಅಂಬುಲೆನ್ಸ್ ಮೂಲಕ ರಸ್ತೆ ಮಾರ್ಗವಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕು ಕಟಪಾಡಿ ಸರಕಾರಿಗುಡ್ಡೆ ಸುಭಾಸ್ ನಗರದ ಮನೆಗೆ ಕರೆತಂದು ಅಂತಿಮ ಪ್ರಕ್ರಿಯಗೆಳನ್ನು ಕೈಗೊಳ್ಳಲಾಗಿತ್ತು. ಅಕಾಲಿಕವಾಗಿ ಮೃತ್ಯುವಿಗೀಡಾಗಿದ್ದು ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ದುಃಖತಪ್ತರಾಗಿದ್ದರು.
ಅವಿವಾಹಿತರಾಗಿದ್ದ ಅಶೋಕ್ ಆಚಾರ್ಯ ತಂದೆ ವ್ಯಾಸರಾಯ ಆಚಾರ್ಯ, ತಾಯಿ ವಾಣಿಶ್ರೀ, ಸಹೋದರರಾದ ಮಂಗಳೂರಿನಲ್ಲಿ ವಿಪ್ರೋ ಸೇಲ್ಸ್, ಸರ್ವಿಸ್ ಉದ್ಯೋಗಿ ರಾಜೇಶ್ ಆಚಾರ್ಯ ಮತ್ತು ಮೂಡಬಿದ್ರಿ ಮೈಟ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರೊಫೆಸರ್ ಸಂತೋಷ್ ಆಚಾರ್ಯ, ಸಹೋದರಿ ಶ್ವೇತಾ ಅವರನ್ನು ಅಗಲಿರುತ್ತಾರೆ.
ಜತೆಗಿದ್ದ ಸ್ನೇಹಿತರು: ಬಹಳಷ್ಟು ಸರಳ ಜೀವನ ನಡೆಸುತ್ತಿದ್ದ ಅಶೋಕ್ ಆಚಾರ್ಯ ಅವರ ಜತೆಗಿದ್ದ ಸ್ನೇಹಿತರು ಯಾರೂ ಕೂಡಾ ಹಿಂದಿರುಗಿ ಬಾರದೇ ಆಸ್ಪತ್ರೆಯಲ್ಲಿಯೇ ಇದ್ದು, ನಿರಂತರವಾಗಿ ಸೇವೆಯನ್ನು ಕೈಗೊಂಡಿದ್ದು, ಪಾರ್ಥಿವ ಶರೀರವನ್ನು ಮನೆಗೆ ತಲುಪಿಸಿ ಅಂತಿಮ ಪ್ರಕ್ರಿಯೆಗಳನ್ನು ಪೂರೈಸುವಲ್ಲಿವರೆಗೂ ದುಃಖದ ಮಡುವಲ್ಲಿಯೂ ಜತೆಯಾಗಿದ್ದರು.







