ಬೆಂಗಳೂರು, ಫೆ. 18: ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಪುನಶ್ಚೇತನಗೊಳಿಸಿ, ಮೊಬೈಲ್ ಬಳಕೆಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಶಿಕ್ಷಣ ಇಲಾಖೆ “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಎಂಬ ಮಹತ್ವಾಕಾಂಕ್ಷಿ ಅಭಿಯಾನವನ್ನು ರಾಜ್ಯದಾದ್ಯಂತ ಜಾರಿಗೆ ತರಲು ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹಾಗೂ ಇತರೆ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ಓದುವಿಕೆಯಲ್ಲಿ ಕುಸಿತ, ಏಕಾಗ್ರತೆಯ ಹಿನ್ನಡೆ, ಕಲಿಕಾ ಆಸಕ್ತಿ ಕಡಿಮೆಯಾಗುವುದು ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳನ್ನು ಕ್ರಿಯಾಶೀಲ, ವಿವೇಚನೆಯುಕ್ತ ಹಾಗೂ ಉನ್ನತ ಚಿಂತನಾ ಸಾಮರ್ಥ್ಯ ಹೊಂದಿದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಇಲಾಖೆಯ ಉದ್ದೇಶವಾಗಿದೆ. ಓದುವಿಕೆಯ ಮೂಲಕ ಬೌದ್ಧಿಕ ವಿಕಾಸ, ಮೌಲ್ಯಾಧಾರಿತ ಚಿಂತನೆ ಮತ್ತು ಜೀವನ ಕೌಶಲ್ಯಗಳ ಬೆಳವಣಿಗೆ ಸಾಧ್ಯವೆಂಬ ನಿಲುವು ವ್ಯಕ್ತಪಡಿಸಲಾಗಿದೆ.
ಶಾಲಾ ಹಂತದಲ್ಲಿ ಕೈಗೊಳ್ಳುವ ಕ್ರಮಗಳು:
ಎಸ್‌ಡಿಎಂಸಿ ಹಾಗೂ ಪೋಷಕರ ಸಭೆಗಳಲ್ಲಿ ಮೊಬೈಲ್ ಬಳಕೆಯ ಪರಿಣಾಮಗಳ ಕುರಿತು ತಜ್ಞರಿಂದ ಜಾಗೃತಿ.
ಮನೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಪೋಷಕರಿಗೆ ಮಾರ್ಗದರ್ಶನ.
ಊಟದ ಸಮಯ, ಮಲಗುವ ಮುನ್ನ ಮೊಬೈಲ್ ಬಳಕೆ ತಡೆಯುವಂತೆ ಸೂಚನೆ.
ಓದುವಿಕೆ ಹಾಗೂ ಆಫ್‌ಲೈನ್ ಚಟುವಟಿಕೆಗಳಿಗೆ ಪ್ರೋತ್ಸಾಹ.
ಪೋಷಕರ ಮಾದರಿ ನಡವಳಿಕೆಗೂ ಒತ್ತು:
ಪೋಷಕರು ಸ್ವತಃ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳೊಂದಿಗೆ ಓದುವಿಕೆ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಲಹೆ ನೀಡಲಾಗಿದೆ.
ಜಾಗೃತಿ ಕಾರ್ಯಕ್ರಮಗಳು:
ಶಾಲೆಗಳಲ್ಲಿ ಪ್ರತಿಭಾ ಕಾರಂಜಿ, ಕಲೋತ್ಸವ, ಭಾಷಣ, ಪೋಸ್ಟರ್ ಮೇಕಿಂಗ್, ಪಾತ್ರಾಭಿನಯ ಮುಂತಾದ ಚಟುವಟಿಕೆಗಳ ಮೂಲಕ ಸುರಕ್ಷಿತ ಹಾಗೂ ಮಿತ ಮೊಬೈಲ್ ಬಳಕೆಯ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಮಾನಸಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ.
ಗ್ರಂಥಾಲಯ ಬಳಕೆಗೆ ಉತ್ತೇಜನ:
ಶಾಲಾ ಗ್ರಂಥಾಲಯದ ಸಮರ್ಪಕ ಬಳಕೆ, ಪುಸ್ತಕ ಪರಿಚಯ, ಕಥೆ ಹೇಳುವ ಸ್ಪರ್ಧೆ, ವಿಮರ್ಶೆ ಬರವಣಿಗೆ ಮುಂತಾದ ಕಾರ್ಯಕ್ರಮಗಳ ಮೂಲಕ ಓದುವ ಹವ್ಯಾಸ ಬೆಳೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ.
ಮೈಂಡ್‌ಫುಲ್‌ನೆಸ್ ತರಬೇತಿ:
ಧ್ಯಾನ, ಯೋಗ ಹಾಗೂ ಮೈಂಡ್‌ಫುಲ್‌ನೆಸ್ ಅಭ್ಯಾಸಗಳ ಮೂಲಕ ಏಕಾಗ್ರತೆ ಹೆಚ್ಚಿಸಿ, ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.
ಇದಲ್ಲದೆ, ಡಿ.ಎಸ್.ಇ.ಆರ್.ಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ Safe Use of Internet and Gadgets ಕುರಿತ ಪೋಸ್ಟರ್‌ಗಳನ್ನು ಶಾಲೆಗಳಲ್ಲಿ ಪ್ರದರ್ಶಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.
ಒಟ್ಟಾರೆ, “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಅಭಿಯಾನವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಕಲಿಕಾ ವಾತಾವರಣ ನಿರ್ಮಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.







