ಉಡುಪಿ ಫೆ. 07: ದ್ವಿಚಕ್ರ ವಾಹನ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಡುಪಿ ನಿವಾಸಿ ಸೆಲ್ವ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ ಕೊರಂಗ್ರಪಾಡಿ–ಮಾರ್ಪಳ್ಳಿ ರಸ್ತೆಯಲ್ಲಿ ಅತೀವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ವಾಹನ ಸ್ಕಿಡ್ ಆಗಿ ಅವರು ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ತೀವ್ರ ಗಾಯವಾಗಿದೆ.
ಅಪಘಾತದ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







