ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಡಿಸೆಂಬರ್ 3೦, 2025ರಂದು ಕರಡು ನಿಯಮಗಳನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೆ ರಾಜ್ಯ ಕಾಂಗ್ರೇಸ್ ಸರ್ಕಾರ ಸಹ ಸಂಹಿತೆಗಳ ಜಾರಿಗೆ ಜನವರಿ 24 ರಂದು ‘ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮಗಳು-2026’ ಪ್ರಕಟಿಸುವ ಮೂಲಕ ರಾಜ್ಯದ ಕಾರ್ಮಿಕರಿಗೆ ದ್ರೋಹ ಬಗೆದಿದೆಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಹಾಗೂ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಟೀಕಿಸಿದೆ. ಕಾರ್ಮಿಕ ವಿರೋಧಿಯಾಗಿ ಪ್ರಕಟಿಸಿರುವ ಕರಡು ನಿಯಮಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಸಿಐಟಿಯು ಆಗ್ರಹಿಸಿದೆ.
ಕೈಗಾರಿಕಾ ಸಂಬಂಧಗಳ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆಯದ ರಾಜ್ಯ ಕಾಂಗ್ರೇಸ್ ಸರ್ಕಾರ ಸಂಹಿತೆಯಲ್ಲಿ ಸೇರಿಸದೆ ಬಿಟ್ಟಿರುವ ಕೆಲವು ಕಠಿಣ ಷರತ್ತುಗಳನ್ನು ಕರಡು ನಿಯಮಗಳಲ್ಲಿ ಸೇರಿಸುವ ಮೂಲಕ ರಾಜ್ಯದಲ್ಲಿನ ಕಾರ್ಮಿಕರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದೆ.
ಕಾರ್ಮಿಕ ಸಂಘದ ನೊಂದಣಿ ಶುಲ್ಕ ರೂ.10 ರಿಂದ ರೂ.1000 ಕ್ಕೆ ಹೆಚ್ಚಿಸಿದೆ, ಸಂಘದ ನೊಂದಣಿಗೆ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ವಿವರಣೆ ಕೇಳಿ ನೀಡುವ ಪ್ರತಿ ನೋಟೀಸ್ ಗೆ ರೂ.100 ಶುಲ್ಕ ನಿಗದಿಪಡಿಸಿದೆ. ಮಾನ್ಯತೆ ಪಡೆದಿರುವ ಕಾರ್ಮಿಕ ಸಂಘ ಅಥವಾ ಜಂಟಿ ಚೌಕಾಶಿ ಸಮಿತಿಗಳು ಇದ್ದರೂ ವರ್ಕ್ಸ್ ಕಮಿಟಿ, ಗ್ರೀವೆನ್ಸ್ ಸಮಿತಿಗಳು ಮಾಡಲು ಮಾಲೀಕರಿಗೆ ಅವಕಾಶ ನೀಡಿದೆ. ಕಾರ್ಮಿಕ ಸಂಘಗಳು ಸದಸ್ಯರಿಂದ ವಾರ್ಷಿಕ ವಂತಿಗೆ ಸಂಗ್ರಹ ಮೇಲೆ ನಿರ್ಬಂಧ ಹಾಗೂ ವಾರ್ಷಿಕ ರೂ.50 ಸಾವಿರಕ್ಕಿಂತಲೂ ಹೆಚ್ಚು ವಹಿವಾಟು ಹೊಂದುವ ಕಾರ್ಮಿಕ ಸಂಘಟನೆಗಳ ಆಡಿಟಿಂಗ್ ಮತ್ತು ಮಾರ್ಚ್ 31ರ ಒಳಗೆ ಆನ್ಯುಯಲ್ ರಿಟರ್ನ್ಸ್ ಸಲ್ಲಿಕೆ ಕಡ್ಡಾಯ ಸೇರಿದಂತೆ ಸಂಘದ ನಿಧಿ ಬಳಕೆ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ಮೂಲಕ ಕಾರ್ಮಿಕರು ತಮ್ಮಇಚ್ಚೇಯ ಸಂಘ ಕಟ್ಟಿಕೊಳ್ಳುವ, ಸಂಘದ ನಿರ್ವಹಣೆಗೆ, ಹೋರಾಟಗಳಿಗೆ ನಿಧಿ ಬಳಸುವ, ಸಂಘದ ಮಾನ್ಯತೆ ಹೊಂದುವ ಹಕ್ಕುಗಳನ್ನು ನಿರಾಕರಿಸಿದೆ.
ಕಾರ್ಮಿಕ ಸಂಘಗಳು ಮುಷ್ಕರ ಮಾಡಲು ಬಹುಸಂಖ್ಯೆಯ ಕಾರ್ಮಿಕರ ಒಪ್ಪಿಗೆ, ಮುಷ್ಕರದ ನೋಟಿಸ್‌ಗೆ ಪ್ರಧಾನ ಕಾರ್ಯದರ್ಶಿ ಜೊತೆಗೆ ಎಲ್ಲಾ ಪದಾಧಿಕಾರಿಗಳ ಮತ್ತು ಆಯ್ಕೆಗೊಂಡ 5 ಮಂದಿ ಇತರೆ ಕಾರ್ಮಿಕ ಪ್ರತಿನಿಧಿಗಳ ಸಹಿ ಕಡ್ಡಾಯಗೊಳಿಸಿದೆ. ಸಂಹಿತೆಯಲ್ಲಿ ವಿವಿಧ ಸ್ವರೂಪದ ಮುಷ್ಕರವನ್ನು ನಿಷೇಧಿಸುವ ಮತ್ತು ಅಕ್ರಮ ಮುಷ್ಕರಕ್ಕೆ ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಬೆಂಬಲಿಸುವವರಿಗೆ ವಿಧಿಸಿರುವ ದಂಡ ಮತ್ತು ಶಿಕ್ಷೆಯನ್ನು ಕರಡು ನಿಯಮಾವಳಿಗಳಲ್ಲಿಯೂ ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಮತ್ತಷ್ಟು ಕಠಿಣಗೊಳಿಸಿ, ದಮನ ಮಾಡುವ ಈ ಕ್ರಮವು ಸಂವಿಧಾನ ವಿರೋಧಿ ಕ್ರಮವಾಗಿದೆ.
ಕೈಗಾರಿಕೆ/ಸಂಸ್ಥೆಗಳು ಲೇ ಆಫ್, ರಿಟ್ರೆಂಚ್‌ಮೆಂಟ್, ಕ್ಲೋಸರ್ ಮಾಡಲು ಸರ್ಕಾರದಅನುಮತಿ ಮಿತಿ 100 ರಿಂದ 300ಕ್ಕೆ ಹೆಚ್ಚಳ ಮಾಡಿ ನಿಯಮಾವಳಿಗಳನ್ನು ರೂಪಿಸಿ ರಾಜ್ಯದಲ್ಲಿರುವ ಶೇ.90 ರಷ್ಟು ಕಾರ್ಖಾನೆಗಳ ಕಾರ್ಮಿಕರನ್ನು ಅಭದ್ರತೆಗೆ ದೂಡಿದೆ. ಕಾರ್ಮಿಕ ಮತ್ತು ಮಾಲೀಕರ ನಡುವಿನ ಇತ್ಯರ್ಥವಾಗದ ಯಾವುದೇ ವಿವಾದಗಳನ್ನು ನ್ಯಾಯ ನಿರ್ಣಯಕ್ಕೆ ಒಪ್ಪಿಸುವ ಕಾರ್ಮಿಕ ಇಲಾಖೆಯ ಸಂಧಾನಾಧಿಕಾರಿಗಳ ಅಧಿಕಾರವನ್ನು ಮೊಟಕುಗೊಳಿಸಿ ಕಾರ್ಮಿಕರಿಗೆ ನ್ಯಾಯ ಮರೀಚಿಕೆಯಾಗುವಂತೆ ಮಾಡಿದೆ. ಕಾರ್ಮಿಕ ಕಾನೂನುಗಳ ಉಲ್ಲಂಘಗಳಿಂದ ಮಾಲೀಕರಿಗೆ ವಿಧಿಸಲಾಗುವ ದಂಡ ಮತ್ತು ಶಿಕ್ಷೆಗಳಿಂದ ಪಾರು ಮಾಡಲು ಹೊಸದಾಗಿ ಕಾಂಪೌಡಿಂಗ್ ಅಧಿಕಾರಿಗಳ ನೇಮಕಕ್ಕೆ ಅವಕಾಶ ಸೇರಿದಂತೆ ಕಾರ್ಮಿಕ ವಿರೋಧಿಯಾದ ನಿಯಮಾವಳಿ ರೂಪಿಸಿರುವುದನ್ನು ಸಿಐಟಿಯು ಖಂಡಿಸಿದೆ.
ಸಂವಿಧಾನದ ಅನುಚ್ಛೇದ 246ರ ಅನ್ವಯ ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಕಾನೂನುಗಳನ್ನು ರಚಿಸುವ ಅಧಿಕಾರ ಹೊಂದಿದೆ. ಆದರೆ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ. ಬದಲಿಗೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ 77ನೇ ಗಣರಾಜೋತ್ಸವ ಆಚರಣೆಯ ಹೊಸ್ತಿಲಲ್ಲಿ ಸಂಹಿತೆಗಳ ಜಾರಿಗೆ ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ಕಾರ್ಮಿಕ ವಿರೋಧಿ ನೀತಿಗಳಲ್ಲಿ ಬಿಜೆಪಿಗೂ ತನಗೂ ಯಾವುದೇ ವ್ಯತ್ಯಾಸವಿಲ್ಲ, ತಾನು ಸಹ ಮೋದಿ ಸರ್ಕಾರದಂತೆ ಬಂಡವಾಳಗಾರರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12, 2026 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದರೂ ಲೆಕ್ಕಿಸದೇ ಸಂಹಿತೆಗಳ ಜಾರಿಗೆ ಮುಂದಾಗಿರುವ ರಾಜ್ಯದ ಬಂಡ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಸಿಐಟಿಯು ತೀವ್ರವಾಗಿ ಖಂಡಿಸಿದೆ. ಫೆಬ್ರವರಿ 12 ರಂದು ಕೇಂದ್ರ ಮತ್ತು ರಾಜ್ಯದ ಎರಡು ಸರ್ಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿ ಲಕ್ಷಾಂತರ ದುಡಿಯುವ ಜನತೆ ಸ್ವಯಂ ಪ್ರೇರಣೆಯಿಂದ ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿ ಪ್ರತಿರೋಧ ನೀಡಲಿದ್ದಾರೆಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಹಾಗೂ ಸಿಐಟಿಯು ಜಿಲ್ಲಾ ಸಮಿತಿ ಎಚ್ಚರಿಕೆ ನೀಡಿದೆ.






