● ಭಾರತೀಯ ವೃತ್ತಿಪರರಲ್ಲಿ 72% ಮಂದಿ 2026ರಲ್ಲಿ ಹೊಸ ಉದ್ಯೋಗ ಹುಡುಕುತ್ತಿದ್ದಾರೆ, ಆದರೆ 76% ಮಂದಿ ಈಗ ಉದ್ಯೋಗ ಹುಡುಕಾಟ ಕಠಿಣವಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣಗಳು: ಹೆಚ್ಚುತ್ತಿರುವ ಸ್ಪರ್ಧೆ, ಹುದ್ದೆಗೆ ಹೊಂದಿಕೊಳ್ಳುವ ಕುರಿತು ಅನುಮಾನ ಮತ್ತು ಕೌಶಲ್ಯಗಳ ಕೊರತೆ.
● ಬೂಮರ್‌ಗಳಿಂದ ಜೆನ್ ಜೀವರೆಗಿನ ಎಲ್ಲಾ ತಲೆಮಾರುಗಳು ಒಂದೇ ಸಮಸ್ಯೆಯನ್ನು ಎದುರಿಸುತ್ತಿವೆ, ಅದೇನೆಂದರೆ ಹೊಸ ಎಐ-ಆಧಾರಿತ ನೇಮಕಾತಿ ಪ್ರಕ್ರಿಯೆಗಳಲ್ಲಿ ಹೇಗೆ ಎದ್ದು ಕಾಣಬೇಕು ಎಂಬುದು ತಿಳಿಯದಾಗಿದೆ. ಆದರೂ ಹೆಚ್ಚಿನವರು ತಮ್ಮ ಉದ್ಯೋಗ ಹುಡುಕಾಟದಲ್ಲಿ ಎಐ ಸಾಧನಗಳನ್ನು ಬಳಸಲು ಯೋಜಿಸುತ್ತಿದ್ದಾರೆ.
● ಲಿಂಕ್ಡ್ ಇನ್ ವೃತ್ತಿಪರರಿಗೆ 2026ರ ಉದ್ಯೋಗ ಮಾರುಕಟ್ಟೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಸಹಾಯ ಮಾಡುತ್ತಿದೆ. ಇದಕ್ಕಾಗಿ ಬೇಡಿಕೆಯ ಉದ್ಯೋಗಗಳ ಪಟ್ಟಿ (Jobs on the rise), ಸಕಾಲಿಕ ಮಾಹಿತಿ, ಎಐ-ಆಧಾರಿತ ಸಾಧನಗಳು ಮತ್ತು ವಿಶ್ವಾಸಾರ್ಹ ನೆಟ್‌ವರ್ಕ್ ಅನ್ನು ಒದಗಿಸುತ್ತಿದೆ.
*ಭಾರತ, 08 ಜನವರಿ, 2026:* ಭಾರತದಲ್ಲಿ 84%¹ ವೃತ್ತಿಪರರು ತಾವು ಹೊಸ ಉದ್ಯೋಗ ಹುಡುಕಲು ಸಿದ್ಧರಿಲ್ಲ ಎಂದು ಭಾವಿಸುತ್ತಾರೆ, ಆದರೂ 72%² ಮಂದಿ 2026ರಲ್ಲಿ ಹೊಸ ಹುದ್ದೆಗಾಗಿ ಹುಡುಕಾಟ ನಡೆಸಿರುವುದಾಗಿ ಹೇಳುತ್ತಾರೆ ಎಂದು ಲಿಂಕ್ಡ್ ಇನ್ ತನ್ನ ನೂತನ ವರದಿಯಲ್ಲಿ ತಿಳಿಸಿದೆ. ಈ ಬದಲಾವಣೆಯು ನೇಮಕಾತಿ ಪ್ರಕ್ರಿಯೆಯಲ್ಲಿ ಎಐ ಬಳಕೆ ಹೆಚ್ಚಳ, ಇಂದಿನ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳಲ್ಲಿ ಆಗಿರುವ ಬದಲಾವಣೆ ಮತ್ತು ಹೆಚ್ಚು ಸ್ಪರ್ಧಾತ್ಮಕವಾದ, ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳುವ ಉದ್ಯೋಗ ಮಾರುಕಟ್ಟೆಯ ಕಾರಣಗಳಿಂದ ಆಗಿದೆ.
ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್ ಆದ *ಲಿಂಕ್ಡ್ ಇನ್* ನ ಹೊಸ ಸಮೀಕ್ಷೆಯ ಪ್ರಕಾರ, ಅನೇಕ ವೃತ್ತಿಪರರು ಎಐ-ಆಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ದಿಕ್ಕುತಪ್ಪಿದ್ದಾರೆ. 87% ಮಂದಿ ಕೆಲಸದಲ್ಲಿ ಎಐ ಬಳಸುವುದರಲ್ಲಿ ನಿರಾಳತೆ³ ಕಂಡುಕೊಂಡಿದ್ದಾರೆ. ಆದರೆ ನೇಮಕಾತಿಯಲ್ಲಿ ಎಐ ಹೇಗೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಅನೇಕರಿಗೆ ಅನುಮಾನಗಳಿವೆ. 77%⁴ ಮಂದಿ ಈ ಎಐ ಪ್ರಕ್ರಿಯೆಯಲ್ಲಿ ಹೆಚ್ಚು ಹಂತಗಳಿವೆ ಎಂದು ಹೇಳುತ್ತಾರೆ ಮತ್ತು 66%⁴ ಮಂದಿ ಈ ಪ್ರಕ್ರಿಯೆಯಲ್ಲಿ ವೈಯಕ್ತಿಕತೆ ಇಲ್ಲವಾಗುತ್ತಿದೆ ಎಂದು ಭಾವಿಸುತ್ತಾರೆ. ನೇಮಕಾತಿದಾರರ ಪ್ರತಿಕ್ರಿಯೆ ಸಮಯ ಮತ್ತು ಪ್ರತಿಕ್ರಿಯೆಯ ಕೊರತೆಯಿಂದ ಕಾಯುವಿಕೆಯಿಂದ ಜಾಸ್ತಿ ಒತ್ತಡ ಉಂಟಾಗುತ್ತದೆ. ಇದರಿಂದ ಎಲ್ಲಾ ತಲೆಮಾರುಗಳ ವೃತ್ತಿಪರರು ತಮ್ಮ ಅರ್ಜಿಯನ್ನು ಹೇಗೆ ಎದ್ದು ಕಾಣುವಂತೆ ಮಾಡಬೇಕು (48% ಒಪ್ಪುತ್ತಾರೆ) ಎಂದು ತಿಳಿಯದೆ ಸಮಸ್ಯೆ ಎದುರಿಸುತ್ತಾರೆ.
ಸಂಶೋಧನಾ ಸಮೀಕ್ಷೆ ಪ್ರಕಾರ, ಉದ್ಯೋಗ ಹುಡುಕುವ ಭಾರತೀಯರಿಗೆ ಎಐ, ಪ್ರೊಡಕ್ಟಿವಿಟಿಗೆ ನೆರವಾಗುವ ಸಾಧನದಿಂದ ವಿಶ್ವಾಸ ಹೆಚ್ಚಿಸುವ ಸಾಧನವಾಗಿ ಬದಲಾಗಿದೆ. 94%⁵ ಮಂದಿ ತಮ್ಮ ಉದ್ಯೋಗ ಹುಡುಕಾಟದಲ್ಲಿ ಎಐ ಬಳಸಲು ಯೋಜಿಸುತ್ತಾರೆ ಮತ್ತು 66%⁴ ಮಂದಿ ಅದು ಸಂದರ್ಶನ ಸಂದರ್ಭದಲ್ಲಿ ವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಸುಮಾರು 76% ಉದ್ಯೋಗ ಹುಡುಕುವವರು ಕಳೆದ ವರ್ಷದಿಂದ ಹೊಸ ಉದ್ಯೋಗ ಹುಡುಕಾಟ ಕಠಿಣವಾಗಿದೆ ಎಂದು ಹೇಳುತ್ತಾರೆ. ಲಿಂಕ್ಡ್ ಇನ್ ಮಾಹಿತಿ ಪ್ರಕಾರ, 2022ರ ಆರಂಭದಿಂದ ಭಾರತದಲ್ಲಿ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇದು ಸ್ಪರ್ಧೆಯನ್ನು ತೀವ್ರಗೊಳಿಸಿ ಅನೇಕರು ತಮಗೆ ಸಿದ್ಧತೆಯ ಕೊರತೆ ಎಂದು ಭಾವಿಸುವಂತೆ ಮಾಡಿದೆ. ಉದ್ಯೋಗ ಹುಡುಕುವವರು ಮಾತ್ರವಲ್ಲ, ಭಾರತೀಯ ನೇಮಕಾತಿದಾರರಲ್ಲಿ ಶೇಕಡ 74% ಮಂದಿ ಕಳೆದ ವರ್ಷದಿಂದ ಯೋಗ್ಯ ಅಭ್ಯರ್ಥಿಗಳನ್ನು ಹುಡುಕುವುದು ಕಠಿಣವಾಗಿದೆ⁶ ಎಂದು ಹೇಳುತ್ತಾರೆ.
ಈ ಸವಾಲು ವೃತ್ತಿ ಮಾರ್ಗಗಳನ್ನು ಮರುರೂಪಿಸುತ್ತಿದೆ. ಜೆನ್ ಎಕ್ಸ್ ಉದ್ಯೋಗ ಹುಡುಕುವವರಲ್ಲಿ ಶೇಕಡ 32% ಮಂದಿ ಹೊಸ ಕೆಲಸಗಳು ಅಥವಾ ಹುದ್ದೆಗಳನ್ನು ಪರಿಗಣಿಸುತ್ತಿದ್ದಾರೆ. ಜೆನ್ ಜೀಗಳಲ್ಲಿ 32% ಮಂದಿ ತಮ್ಮ ಪ್ರಸ್ತುತ ಉದ್ಯಮದ ಹೊರಗಿನ ಹುದ್ದೆಗಳನ್ನು ಹುಡುಕುತ್ತಿದ್ದಾರೆ. ಅದೇ ಸಮಯದಲ್ಲಿ, ಹೆಚ್ಚು ಮಂದಿ ಸಾಂಪ್ರದಾಯಿಕ ಹುದ್ದೆಗಳನ್ನು ಬಿಟ್ಟು ಉದ್ಯಮಶೀಲತೆಗೆ ಹೆಜ್ಜೆ ಇಡುತ್ತಿದ್ದಾರೆ. ಲಿಂಕ್ಡ್ ಇನ್‌ನಲ್ಲಿ ‘ಸಂಸ್ಥಾಪಕ’ (founder) ಎಂಬ ಸ್ಥಾನವು ತ್ವರಿತವಾಗಿ ಹೆಚ್ಚಾಗುತ್ತಿದೆ.
*ಲಿಂಕ್ಡ್ ಇನ್ ಕೆರಿಯರ್ ಎಕ್ಸ್ ಪರ್ಟ್ ಮತ್ತು ಲಿಂಕ್ಡ್ ಇನ್ ಇಂಡಿಯಾ ನ್ಯೂಸ್‌ನ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಜಿತಾ ಬ್ಯಾನರ್ಜಿ* ಈ ಕುರಿತು ಮಾತನಾಡಿ, “ಎಐ ಈಗ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ವೃತ್ತಿಗಳನ್ನು ರೂಪಿಸುವ ಮತ್ತು ಪ್ರತಿಭೆಯನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯ ಮೂಲಭೂತ ಭಾಗವಾಗಿದೆ. ತಮ್ಮ ಕೌಶಲ್ಯಗಳು ಅವಕಾಶಗಳಾಗಿ ಹೇಗೆ ಬದಲಾಗುತ್ತವೆ ಮತ್ತು ನೇಮಕಾತಿ ನಿರ್ಧಾರಗಳು ನಿಜವಾಗಿ ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದರ ಸ್ಪಷ್ಟ ತಿಳುವಳಿಕೆ ಇರಬೇಕಾದದ್ದು ವೃತ್ತಿಪರರಿಗೆ ಅತ್ಯಂತ ಅಗತ್ಯ. ಉದ್ದೇಶಪೂರ್ವಕವಾಗಿ ಬಳಸಿದರೆ, ಎಐ ಸಾಧನಗಳು ಆ ಅಂತರವನ್ನು ತುಂಬಬಲ್ಲವು. ಸರಿಯಾದ ಹುದ್ದೆಗಳನ್ನು ಗುರುತಿಸಲು, ಉದ್ದೇಶದೊಂದಿಗೆ ತಯಾರಾಗಲು ಮತ್ತು ಕೌಶಲ್ಯ ಕಲಿಕೆಯ ಕಡೆಗೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಅಲ್ಲಿ ಲಿಂಕ್ಡ್ ಇನ್ ಉದ್ಯೋಗ ಹುಡುಕುವವರು ಮತ್ತು ನೇಮಕಾತಿದಾರರಿಗೆ ಆ ಕ್ಷಣವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದರು.
*ಲಿಂಕ್ಡ್ ಇನ್ ಜಾಬ್ಸ್ ಆನ್ ದಿ ರೈಸ್ ಈಗ ಬೇಡಿಕೆ ಇರುವ ಹುದ್ದೆಗಳನ್ನು ತೋರಿಸುತ್ತದೆ*
2026ಕ್ಕೆ ಉದ್ಯೋಗ ಹುಡುಕುವವರು ಉತ್ತಮವಾಗಿ ಸಿದ್ಧರಾಗಲು ಸಹಾಯ ಮಾಡಲು, ಲಿಂಕ್ಡ್ ಇನ್‌ನ ಇಂಡಿಯಾ ಜಾಬ್ಸ್ ಆನ್ ದಿ ರೈಸ್ ವರದಿಯು ಕಳೆದ 3 ವರ್ಷಗಳಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಹುದ್ದೆಗಳನ್ನು ಹೈಲೈಟ್ ಮಾಡುತ್ತದೆ. ಈ ವರ್ಷದ ಪಟ್ಟಿಯಲ್ಲಿ ಪ್ರಾಂಪ್ಟ್ ಇಂಜಿನಿಯರ್ (#1), ಎಐ ಇಂಜಿನಿಯರ್ (#2), ಮತ್ತು ಸಾಫ್ಟ್ ವೇರ್ ಇಂಜಿನಿಯರ್ (#3) ಹುದ್ದೆಗಳು ಮುಂಚೂಣಿಯಲ್ಲಿವೆ. ಇದು ಎಐ ಮತ್ತು ತಂತ್ರಜ್ಞಾನ ಪ್ರತಿಭೆಗೆ ಇರುವ ನಿರಂತರ ಬೇಡಿಕೆಯನ್ನು ತೋರಿಸುತ್ತದೆ. ಶುದ್ಧ ತಂತ್ರಜ್ಞಾನದ ಹೊರತಾಗಿ, ಮಾರಾಟ ಮತ್ತು ಬ್ರ್ಯಾಂಡ್ ಸ್ಟ್ರಾಟಜಿ, ಸೈಬರ್ ಸೆಕ್ಯುರಿಟಿ ಮತ್ತು ಸಲಹಾ ಕಾರ್ಯಗಳಲ್ಲಿ ಆರೋಗ್ಯಕರ ಬೇಡಿಕೆ ಕಾಣುತ್ತಿದೆ. ಅದೇ ಸಮಯದಲ್ಲಿ, ಪಶುವೈದ್ಯ, ಸೋಲಾರ್ ಕನ್ಸಲ್ಟೆಂಟ್ ಮತ್ತು ಬಿಹೇವಿಯರಲ್ ಥೆರಪಿಸ್ಟ್ ಪಾತ್ರಗಳ ಬೇಡಿಕೆಯೂ ಏರುತ್ತಿವೆ.
*ಲಿಂಕ್ಡ್ ಇನ್‌ನ ಎಐ ಸಾಧನಗಳು ಉದ್ಯೋಗ ಹುಡುಕಾಟ ಮತ್ತು ಹುದ್ದೆಯಲ್ಲಿನ ಹೊಂದಾಣಿಕೆಯನ್ನು ಹೇಗೆ ಸುಧಾರಿಸುತ್ತಿವೆ*
ಲಿಂಕ್ಡ್ ಇನ್ ವಿವಿಧ ಎಐ ಸಾಧನಗಳನ್ನು ನೀಡುತ್ತದೆ. ಅದರಲ್ಲಿ ಎಐ-ಆಧಾರಿತ ಉದ್ಯೋಗ ಹುಡುಕಾಟವೂ ಸೇರಿದೆ. ಇದು ಸದಸ್ಯರು ತಮ್ಮ ಸ್ವಂತ ಮಾತಿನಲ್ಲಿ ಉದ್ಯೋಗಗಳನ್ನು ಹುಡುಕಲು ಅನುವು ಮಾಡಿಕೊಡುತ್ತದೆ ಮತ್ತು ಅವರು ಯೋಚಿಸದ ಹುದ್ದೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಈ ಸಾಧನ ಈಗ ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ. ಜಾಗತಿಕವಾಗಿ 1.3 ಮಿಲಿಯನ್‌ಗಿಂತ ಹೆಚ್ಚು ಸದಸ್ಯರು² ಈ ಫೀಚರ್ ಅನ್ನು ಪ್ರತಿದಿನ ಬಳಸುತ್ತಿದ್ದಾರೆ ಮತ್ತು ಪ್ರತಿ ವಾರ 25 ಮಿಲಿಯನ್‌ಗಿಂತ ಹೆಚ್ಚು ಹುಡುಕಾಟಗಳು ನ್ಯೂ ಜಾಬ್ ಸರ್ಚ್ ಫೀಚರ್ ನಿಂದ ನಡೆಯುತ್ತಿವೆ. ಸಂಬಂಧಿತ ಹುದ್ದೆಗಳನ್ನು ಹುಡುಕಿದ ನಂತರ, ಲಿಂಕ್ಡ್ ಇನ್‌ನ ಜಾಬ್ ಮ್ಯಾಚ್ ವೈಶಿಷ್ಟ್ಯ ಬಳಸಿ ನಿಮ್ಮ ಕೌಶಲ್ಯಗಳು ಮತ್ತು ಅರ್ಹತೆಗಳಿಗೆ ಹೊಂದಿಕೆಯಾಗುವ ಹುದ್ದೆಗಳನ್ನು ನೋಡಬಹುದು. ಹೀಗೆ ನೀವು ಹೊಂದಿಕೊಳ್ಳುವ ಮತ್ತು ನೇಮಕಾತಿದಾರರು ಪರಿಗಣಿಸುವ ಸಾಧ್ಯತೆ ಹೆಚ್ಚಿರುವ ಅವಕಾಶಗಳಿಗೆ ಅರ್ಜಿ ಸಲ್ಲಿಸಲು ಗಮನ ಕೇಂದ್ರೀಕರಿಸಬಹುದು.
*ಉದ್ಯೋಗ ಹುಡುಕಾಟಕ್ಕೆ ಸಹಾಯ ಮಾಡಲು ಲಿಂಕ್ಡ್ ಇನ್ ಕೆರಿಯರ್ ಎಕ್ಸ್ ಪರ್ಟ್ ಸಲಹೆಗಳು*
*● ವಿಶ್ವಾಸದೊಂದಿಗೆ ಉದ್ಯೋಗ ಹುಡುಕಾಟವನ್ನು ಮಾಡಲು ಮುಂದಾಗಿ:* linkedin.com/jobsearchguide ಗೆ ಹೋಗಿ ಕಾರ್ಯರೂಪಕ್ಕೆ ಬರುವ ಸಲಹೆಗಳು, ನಮ್ಮ ಸಾಧನಗಳ ಬಳಕೆಯ ಸಲಹೆಗಳು, ಉಚಿತ ಕೋರ್ಸ್‌ಗಳಿಗೆ ಸೇರಿಕೊಳ್ಳಿ ಮತ್ತು ಉತ್ತಮ ಪ್ರಯೋಜನ ಪಡೆಯಿರಿ.
*● ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳಿ:* ಉದ್ಯೋಗ ಮಾರುಕಟ್ಟೆ ತ್ವರಿತವಾಗಿ ಬದಲಾಗುತ್ತಿದೆ, ಆದ್ದರಿಂದ ಅದಕ್ಕೆ ಸಿದ್ಧರಾಗಿ ಕ್ರಮ ತೆಗೆದುಕೊಳ್ಳುವುದು ಮುಖ್ಯ. ನಿಮ್ಮ ಉದ್ಯಮದ ಟ್ರೆಂಡ್‌ಗಳನ್ನು ನೋಡಿ ಮತ್ತು ಮುಂದಿನ ಹುದ್ದೆಯಲ್ಲಿ ನಿಮಗೆ ಏನು ಬೇಕು ಎಂದು ಯೋಚಿಸಿ ಪಯಣ ಆರಂಭಿಸಿ. ನಿಮ್ಮನ್ನು ಅಲ್ಲಿಗೆ ಕೊಂಡೊಯ್ಯಬಲ್ಲ ಕೌಶಲ್ಯಗಳನ್ನು ಗುರುತಿಸಿ ಮತ್ತು ಇಂದೇ ಅದನ್ನು ಕಲಿಯಲು ಕೆಲವು ನಿರ್ದಿಷ್ಟ ಹೆಜ್ಜೆಗಳನ್ನು ಇಟ್ಟು ವಿಶ್ವಾಸ ಹೆಚ್ಚಿಸಿಕೊಳ್ಳಿ.
*● ಉದ್ಯೋಗ ಹುಡುಕಾಟದಲ್ಲಿ ಎಐಗೆ ಒಗ್ಗಿಕೊಳ್ಳಿ:* ಎಐ ಸಾಧನಗಳು ಹುದ್ದೆಗಳನ್ನು ಹುಡುಕುವುದರಿಂದ ಹಿಡಿದು ನೇಮಕಾತಿದಾರರು ಪೂರ್ವ-ಪರೀಕ್ಷೆ ಮಾಡುವವರೆಗೆ ಮತ್ತು ಸಂದರ್ಶನಕ್ಕೆ ತಯಾರಾಗುವವರೆಗೆ ಉದ್ಯೋಗ ಹುಡುಕಾಟದ ಎಲ್ಲಾ ಭಾಗಗಳನ್ನು ಮರುರೂಪಿಸುತ್ತಿದೆ. ಹಾಗಾಗಿ ಸಣ್ಣ ಹೆಜ್ಜೆ ಇಟ್ಟು ಆರಂಭಿಸಿ. ಸರಿಯಾದ ಹುದ್ದೆ ಹುಡುಕಾಟವನ್ನು ವೇಗಗೊಳಿಸಲು ಲಿಂಕ್ಡ್ ಇನ್‌ನ ಜಾಬ್ ಮ್ಯಾಚ್ ಸಾಧನವನ್ನು ಪ್ರಯತ್ನಿಸಿ.
*● ನಿಮ್ಮ ಪ್ರೊಫೈಲ್ ಅನ್ನು ಹೊಸದಾಗಿ ಕಾಣಿಸುವಂತೆ ಮಾಡಿ:* ನಿಮ್ಮ ಪ್ರೊಫೈಲ್ ಉದ್ಯೋಗದಾತರು ಮೊದಲು ನೋಡುವ ಒಂದು ಜಾಗ. ನಿಮ್ಮ ಹೊಸ ಕೌಶಲ್ಯಗಳು ಮತ್ತು ಅನುಭವಗಳು ಕಾಣಿಸಲು ಮತ್ತು ಸ್ಪಷ್ಟವಾಗಿ ಹೈಲೈಟ್ ಆಗಿರಲಿ. ಕೆಲಸದ ಸ್ಥಳ ಮತ್ತು ಗುರುತು ಮಾಹಿತಿಯನ್ನು ಪರಿಶೀಲಿಸಿ, ನೇಮಕಾತಿದಾರರಿಗೆ ವಿಶ್ವಾಸ ಹೆಚ್ಚಿಸಲು, ನಿಮ್ಮನ್ನು ಪ್ರತ್ಯೇಕಿಸಿ ನೋಡುವಲ್ಲಿ ಇದು ಬಹಳ ಮುಖ್ಯ.
*● ನಿಮ್ಮ ಟಾಪ್ ಚಾಯ್ಸ್ ಉದ್ಯೋಗವನ್ನು ಮಾರ್ಕ್ ಮಾಡಿ:* ನೀವು ಪ್ರೀಮಿಯಂ ಸಬ್‌ಸ್ಕ್ರೈಬರ್ ಆಗಿದ್ದರೆ, ಈಸಿ ಅಪ್ಲೈ ಮೂಲಕ ಅರ್ಜಿ ಸಲ್ಲಿಸುವಾಗ ನೀವು ಬಯಸುವ ಉದ್ಯೋಗವನ್ನು ಟಾಪ್ ಚಾಯ್ಸ್ ಎಂದು ಮಾರ್ಕ್ ಮಾಡಿ. ಇದು ನೇಮಕಾತಿದಾರರಿಗೆ ನೀವು ಅವರು ಪೋಸ್ಟ್ ಮಾಡಿದ ಉದ್ಯೋಗಕ್ಕೆ ಸೇರಲು ಬಲವಾದ ಆಸಕ್ತಿ ಹೊಂದಿದ್ದೀರಿ ಎಂಬ ಸಂಕೇತ ನೀಡುತ್ತದೆ. ಟಾಪ್ ಚಾಯ್ಸ್ ಆಯ್ಕೆ ಮಾಡುವುದು ನೇಮಕಾತಿದಾರ ಸಂದೇಶ ಬರುವ ಸಾಧ್ಯತೆಯನ್ನು 43% ಹೆಚ್ಚಿಸುತ್ತದೆ.
*● ನಿಮ್ಮ ನೆಟ್ ವರ್ಕ್ ಅನ್ನು ಬಳಸಿಕೊಳ್ಳಿ:* ನಿಮ್ಮ ನೆಟ್‌ವರ್ಕ್ ನಿಮ್ಮ ಬಲವಾದ ಸಂಪನ್ಮೂಲ. ಪೋಸ್ಟ್ ಗಳಿಗೆ ಕಾಮೆಂಟ್ ಮಾಡುವುದು ಅಥವಾ ನೇರವಾಗಿ ಸಂಪರ್ಕಿಸುವುದು ಇತ್ಯಾದಿ ಕ್ರಮ ಮಾಡುವುದರಿಂದ ನಿಮಗೆ ಬೆಂಬಲ ದೊರೆಯಬಹುದು, ಅವಕಾಶಗಳನ್ನು ಹುಟ್ಟುಹಾಕಬಹುದು ಮತ್ತು ನಿರೀಕ್ಷೆಗಿಂತ ಹೆಚ್ಚಿನ ಅವಕಾಶಗಳ ಬಾಗಿಲು ತೆರೆಯಬಹುದು. ಸಾದಾ ಭಾಷೆಯಲ್ಲಿ ಜನರನ್ನು ಹುಡುಕಿ, ನಿಮ್ಮ ನೆಟ್‌ವರ್ಕ್‌ನ ಸಾಮರ್ಥ್ಯವನ್ನು ಹೆಚ್ಚು ಮಾಡಲು ಲಿಂಕ್ಡ್ ಇನ್‌ನ ಹೊಸ ಎಐ-ಆಧಾರಿತ ಪೀಪಲ್ ಸರ್ಚ್ ಅನ್ನು ಪ್ರಯತ್ನಿಸಿ..
*● ಹೊಸ ಅವಕಾಶಗಳನ್ನು ಕಂಡುಹಿಡಿಯಿರಿ:* ಲಿಂಕ್ಡ್ ಇನ್‌ನ ಜಾಬ್ಸ್ ಆನ್ ದಿ ರೈಸ್ ನಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳನ್ನು ಅನ್ವೇಷಿಸಿ. ಈ ವರದಿಯಲ್ಲಿ ವೃತ್ತಿಪರರು ಮುಂದಿನ ಉದ್ಯೋಗ ಪಡೆಯಲು ಸಹಾಯಕವಾದ ಮಾಹಿತಿ, ಪ್ರಮುಖ ಕೌಶಲ್ಯಗಳ ವಿವರ, ನೇಮಕಾತಿ ಹಾಟ್‌ಸ್ಪಾಟ್‌ಗಳು, ಕಲಿಕಾ ಸಂಪನ್ಮೂಲಗಳು, ತೆರೆದ ಉದ್ಯೋಗಗಳ ಲಿಂಕ್‌ಗಳು ಮತ್ತು ಹೆಚ್ಚಿನವು ಸಿಗುತ್ತವೆ.
*ಅನುಬಂಧ: ಲಿಂಕ್ಡ್‌ಇನ್‌ನ ಇಂಡಿಯಾ ಜಾಬ್ಸ್ ಆನ್ ದಿ ರೈಸ್ 2026:*
1. ಪ್ರಾಂಪ್ಟ್ ಇಂಜಿನಿಯರ್
2. ಎಐ ಇಂಜಿನಿಯರ್
3. ಸಾಫ್ಟ್ ವೇರ್ ಇಂಜಿನಿಯರ್
4. ಮ್ಯಾನೇಜರ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್
5. ಸ್ಟ್ರಾಟೆಜಿಕ್ ಅಡ್ವೈಸರ್
6. ಮೀಡಿಯಾ ಬೈಯರ್
7. ಸೇಲ್ಸ್ ಸ್ಪೆಷಲಿಸ್ಟ್
8. ಬಿಹೇವಿಯರಲ್ ಥೆರಪಿಸ್ಟ್
9. ವೆಟರಿನೇರಿಯನ್
10. ಸೋಲಾರ್ ಕನ್ಸಲ್ಟೆಂಟ್
11. ಬ್ರ್ಯಾಂಡ್ ಸ್ಟ್ರಾಟಜಿಸ್ಟ್
12. ಕಾನೂನು ತಜ್ಞ
13. ಸೈಬರ್ ಸೆಕ್ಯುರಿಟಿ ತಜ್ಞ
14. ಸಂಸ್ಥಾಪಕ
15. ಬಿಸಿನೆಸ್ ಡೆವಲಪ್ ಮೆಂಟ್ ಡೈರೆಕ್ಟರ್
*ಅನುಬಂಧ:*
1. ‘2026ರ ಉದ್ಯೋಗ ಹುಡುಕಾಟಕ್ಕೆ ನಾನು ಸಿದ್ಧನಿದ್ದೇನೆ’ ಎಂದು ಆಯ್ಕೆ ಮಾಡಿದವರ ಮಾಹಿತಿ
2. ‘ಹೌದು, ನಾನು ಈಗಾಗಲೇ ಹೊಸ ಉದ್ಯೋಗ ಹುಡುಕುತ್ತಿದ್ದೇನೆ’ ಮತ್ತು ‘ಹೌದು, 2026ರಲ್ಲಿ ಹೊಸ ಉದ್ಯೋಗ ಹುಡುಕಲು ಯೋಜಿಸುತ್ತಿದ್ದೇನೆ’ ಎಂಬ ಅಂಕಿಅಂಶಗಳ ಸಂಯೋಜನೆ
3. ‘ಹೌದು, ಬಹಳ ವಿಶ್ವಾಸವಿದೆ’ ಮತ್ತು ‘ಹೌದು, ಸ್ವಲ್ಪ ವಿಶ್ವಾಸವಿದೆ’ ಎಂಬ ಅಂಕಿಅಂಶಗಳ ಸಂಯೋಜನೆ
4. ‘ಪೂರ್ಣವಾಗಿ ಒಪ್ಪುತ್ತೇನೆ’ ಮತ್ತು ‘ಸ್ವಲ್ಪ ಒಪ್ಪುತ್ತೇನೆ’ ಎಂಬ ಅಂಕಿಅಂಶಗಳ ಸಂಯೋಜನೆ
5. ಉದ್ಯೋಗ ಹುಡುಕಾಟ ಪ್ರಕ್ರಿಯೆಯಲ್ಲಿ ಎಐ ಬಳಸಿದ್ದೇನೆ ಅಥವಾ ಬಳಸಲು ಯೋಜಿಸುತ್ತಿದ್ದೇನೆ ಎಂಬುದಕ್ಕೆ ‘ಮೇಲಿನವು ಯಾವುದೂ ಅಲ್ಲ’ ಎಂದು ಆಯ್ಕೆ ಮಾಡಿದವರ ಮಾಹಿತಿ
6. ‘ಗಣನೀಯವಾಗಿ ಹೆಚ್ಚು ಕಠಿಣ’ ಮತ್ತು ‘ಮಧ್ಯಮವಾಗಿ ಹೆಚ್ಚು ಕಠಿಣ’ ಎಂಬ ಪ್ರತಿಕ್ರಿಯೆಗಳ ಸಂಯೋಜನೆ






