ವಾಷಿಂಗ್ಟನ್, ಜನವರಿ 6:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಸುಂಕ ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದ ತೈಲ ಪ್ರದೇಶವನ್ನು ವಶಪಡಿಸಿಕೊಂಡಿರುವ ಟ್ರಂಪ್, ಭಾರತದ ಪ್ರಧಾನಿ ಮೋದಿ ಅವರನ್ನು ಹೊಗಳುತ್ತಲೇ, ರಷ್ಯಾದಿಂದ ತೈಲ ಖರೀದಿ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಮೇಲೆ ಬೆದರಿಕೆ ಹಾಕುವುದನ್ನು ಇನ್ನೂ ನಿಲ್ಲಿಸಿಲ್ಲ. ರಷ್ಯನ್ ತೈಲ ಆಮದನ್ನು ಭಾರತ ಮುಂದುವರಿಸುತ್ತಿರುವುದು ಅಮೆರಿಕ ಅಧ್ಯಕ್ಷರಿಗೆ ಕಿರಿಕಿರಿ ತಂದಂತಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಬೈಟ್ನಲ್ಲಿ ಅವರು ರಷ್ಯನ್ ತೈಲ ಖರೀದಿ ಸಂಬಂಧ ಭಾರತದ ಮೇಲೆ ಟ್ಯಾರಿಫ್ (US Tariffs) ಅನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ
ಭಾರತದ ಮೇಲೆ ಅಮೆರಿಕ ಈಗಾಗಲೇ ಶೇ. 50ರಷ್ಟು ಆಮದು ಸುಂಕ ಹಾಕುತ್ತಿದೆ. ಇನ್ನೂ ಹೆಚ್ಚಿನ ಮಟ್ಟದ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ತನ್ನನ್ನು ಖುಷಿ ಪಡಿಸದಿದ್ದರೆ ಟ್ಯಾರಿಫ್ ಬರೆ ಹಾಕಬೇಕಾದೀತು ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.
ಅವರು ನನ್ನನ್ನು ಖುಷಿಪಡಿಸಲು ಬಯಸುತ್ತಾರೆ. ಪಿಎಂ ಮೋದಿ ಬಹಳ ಒಳ್ಳೆಯ ಮನುಷ್ಯ, ಒಳ್ಳೆಯ ವ್ಯಕ್ತಿ. ನಾನು ಖುಷಿಯಾಗಿಲ್ಲ ಅಂತ ಅವರಿಗೆ ಗೊತ್ತು. ನನ್ನನ್ನು ಸಂತೋಷವಾಗಿ ಇಡುವುದು ಮುಖ್ಯ. ಅವರು ವ್ಯಾಪಾರ ಮಾಡುತ್ತಾರೆ. ನಾವು ಅವರ ಮೇಲೆ ಬಹಳ ಬೇಗ ಟ್ಯಾರಿಫ ಹೆಚ್ಚಿಸಬಲ್ಲೆವು..’ ಎಂದು ಟ್ರಂಪ್ ಹೇಳಿರುವ ಆಡಿಯೋ ತುಣಕನ್ನು ಎಎನ್ಐ ಸುದ್ದಿ ಸಂಸ್ಥೆ ತನ್ನ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.






